ನವದೆಹಲಿ: ಅಮೆಜಾನ್ ಕಂಪನಿಯ ಇತಿಹಾಸದಲ್ಲಿಯೇ ಅತಿದೊಡ್ಡ ಸಿಬ್ಬಂದಿ ಕಡಿತ ಮುಂದುವರಿದಿದ್ದು, ವಿಶೇಷವಾಗಿ ಎಂಜಿನಿಯರಿಂಗ್ ವಿಭಾಗದ ಮೇಲೆ ಪರಿಣಾಮ ಬೀರಿದೆ. ಅಲ್ಲದೇ ಅಕ್ಟೋಬರ್ ತಿಂಗಳಿನಲ್ಲಿ 1,800ಕ್ಕೂ ಅಧಿಕ ಎಂಜಿನಿಯರ್ ಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಕಾರ್ಮಿಕ ಇಲಾಖೆಯ ದಾಖಲೆಗಳು ತಿಳಿಸಿವೆ.
ಕಂಪನಿಯು 2025 ರ ಅಕ್ಟೋಬರ್ ನಲ್ಲಿ 14,000 ಕ್ಕೂ ಹೆಚ್ಚು ಉದ್ಯೋಗ ಕಡಿತ ಘೋಷಿಸಿತ್ತು. ಈ ಉದ್ಯೋಗ ಕಡಿತ ಕ್ಲೌಡ್ ಸೇವೆಗಳು ಮತ್ತು ತಾಂತ್ರಿಕ ವಿಭಾಗದಿಂದ ಹಿಡಿದು ಚಿಲ್ಲರೆ ವ್ಯಾಪಾರ, ಜಾಹೀರಾತು ಮತ್ತು ದಿನಸಿಗಳವರೆಗೆ ಅದರ ವ್ಯವಹಾರದ ಪ್ರತಿಯೊಂದು ವಿಭಾಗದ ಮೇಲೂ ಪರಿಣಾಮ ಬೀರಿತ್ತು.
ನ್ಯೂಯಾರ್ಕ್, ಕ್ಯಾಲಿಫೋರ್ನಿಯಾ, ನ್ಯೂಜೆರ್ಸಿ ಮತ್ತು ವಾಷಿಂಗ್ಟನ್ ಸೇರಿದಂತೆ ಇತರೆಡೆ ಸಲ್ಲಿಸಲಾದ ದಾಖಲೆಗಳ ಪ್ರಕಾರ, ಎಂಜಿನಿಯರಿಂಗ್ ವಿಭಾಗದ ಮೇಲೆ ಎಷ್ಟು ತೀವ್ರ ಪರಿಣಾಮ ಬೀರಿದೆ ಎಂಬುದನ್ನು ಗಮನಿಸಬಹುದಾಗಿದೆ ಎಂದು ವರದಿ ತಿಳಿಸಿದೆ.
2026ರ ಜನವರಿಯಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತದ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ. ” AI ಇಂಟರ್ನೆಟ್ ನಂತರ ನಾವು ನೋಡಿದ ಅತ್ಯಂತ ಪರಿವರ್ತಕ ತಂತ್ರಜ್ಞಾನವಾಗಿದೆ ಮತ್ತು ಇದು ಕಂಪನಿಗಳು ಹಿಂದೆಂದಿಗಿಂತಲೂ ವೇಗವಾಗಿ ಹೊಸತನವನ್ನು ಕಂಡುಕೊಳ್ಳಲು ಅನುವು ಮಾಡಿಕೊಡುತ್ತದೆ” ಎಂದು ವರದಿ ವಿವರಿಸಿದೆ.

















