ಸಮಾಜದಲ್ಲಿ ಧನಾತ್ಮಕತೆ ಹೆಚ್ಚಲಿ- ಮಾಣಿಲ ಸ್ವಾಮೀಜಿ

ಉಡುಪಿ: ಸಮಾಜದಲ್ಲಿ ಋಣಾತ್ಮಕ ದೌರ್ಬಲ್ಯ ಕಡಿಮೆಯಾಗಿ ಧನಾತ್ಮಕತೆ ಹೆಚ್ಚಬೇಕು. ಜಗತ್ತು ಭಗವಂತನ ಸಾಮ್ರಾಜ್ಯ ಎನ್ನುವುದನ್ನು ಎಲ್ಲರೂ ಅರಿಯಬೇಕು ಎಂದು ಶ್ರೀ ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಪ್ರಯುಕ್ತ ರಾಜಾಂಗಣದಲ್ಲಿ ನಡೆದ ಸಂತ ಸಂದೇಶ ಕಾರ್ಯಕ್ರಮದಲ್ಲಿ ಅವರು ಅನುಗ್ರಹ ಸಂದೇಶ ನೀಡಿದರು.
ವಿಶ್ವಶಾಂತಿ, ಲೋಕದ ಹಿತಕ್ಕೆ ಸಂತರ ಮನಸ್ಸು ಒಂದಾಗಬೇಕು ಎನ್ನುವ ನೆಲೆಯಲ್ಲಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಬಹಳದೊಡ್ಡ ಕಾರ್ಯ ಮಾಡುತ್ತಿದ್ದಾರೆ. ಜಗತ್ತು ಭಗವಂತನ ಸಾಮ್ರಾಜ್ಯ ಎಂಬುದನ್ನು ಅರಿತು ಭಕ್ತಿ ಮಾರ್ಗದ ಮೂಲಕ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ದೊಡ್ಡ ಸಾಧನೆಯನ್ನು ಶ್ರೀಗಳು ಮಾಡುತ್ತಿದ್ದಾರೆ ಎಂದರು.

ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅನುಗ್ರಹಿಸಿ, ಸನಾತನ ಧರ್ಮದಲ್ಲಿ ಸ್ವಯಂ ಪರಿವರ್ತನೆಯಿಂದ ಸಾಧು ಸಂತರಾಗಿ ಸಮಾಜಕ್ಕೆ ನೀಡುತ್ತಾರೆ. ವೈಯಕ್ತಿಕ, ಧಾರ್ಮಿಕ ಸಿದ್ಧಿಯು ಆಗುತ್ತದೆ ಎಂದರು.
ಕಾರವಾರದ ರಾಮಚಂದ್ರ ಹಬ್ಬು ದಂಪತಿ, ಪ್ರಕಾಶ್ ರಾಮಮೂರ್ತಿ ರಾವ್ ದಂಪತಿ, ಸುಬ್ರಹ್ಮಣ್ಯ ನರಸಿಂಹ ಭಟ್ ದಂಪತಿಯನ್ನು ಶ್ರೀಮಠದಿಂದ ಸಮ್ಮಾನಿಸಲಾಯಿತು. ಶ್ರೀಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಉಪಸ್ಥಿತರಿದ್ದರು. ಡಾ. ಬಿ.ಗೋಪಾಲಾಚಾರ್ಯ ನಿರೂಪಿಸಿ ವಂದಿಸಿದರು.