ನ.16ರಂದು ತುಳು ಕೋಟಿಗೀತಾ ಲೇಖನ ಯಜ್ಞ ಸಮರ್ಪಣೆ

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠ ಉಡುಪಿ ಶ್ರೀಕೃಷ್ಣಮಠ ಹಾಗೂ ಜೈ ತುಳುನಾಡ್ ಉಡುಪಿ ಘಟಕದ ಜಂಟಿ ಆಶ್ರಯದಲ್ಲಿ ತುಳು ಕೋಟಿಗೀತಾ ಲೇಖನ ಯಜ್ಞ ಸಮರ್ಪಣೆ ಕಾರ್ಯಕ್ರಮ ನ.16ರ ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಜೈ ತುಳುನಾಡು ಸಂಸ್ಥೆಯ ಸಂಘಟನ ಕಾರ್ಯದರ್ಶಿ ಸಂತೋಷ್ ಕಟಪಾಡಿ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಂದ್ರತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಸುಮಾರು 150 ಮಂದಿ ತುಳು ಲಿಪಿಯಲ್ಲಿ ಬರೆದ ಕೋಟಿ ಗೀತಾ ಲೇಖನ ಯಜ್ಞದ ಸಮರ್ಪಣೆಯು ನಡೆಯಲಿದೆ. ಸುಮಾರು 400 ಮಂದಿ ತುಳು ಲಿಪಿಯಲ್ಲಿ ಕೋಟಿಗೀತಾ ಲೇಖನಯಜ್ಞ ಬರೆಯುತ್ತಿದ್ದಾರೆ. ನ.16ರ ಬೆಳಗ್ಗೆ ಜೋಡುಕಟ್ಟೆಯಿಂದ ಮೆರವಣಿಗೆ ಮೂಲಕ ಹೋಗಿ ಶ್ರೀಕೃಷ್ಣನಿಗೆ ತುಳು ಕೋಟಿಗೀತೆ ಸಮರ್ಪಣೆ ಮಾಡಲಾಗುವುದು ಎಂದರು.

ಶ್ರೀಮಠದ ಕೋಟಿ ಗೀತಾಲೇಖನ ಯಜ್ಞದ ಕೆ.ವಿ. ರಮಣಾಚಾರ್ಯ ಮಾತನಾಡಿ, ತುಳುವಿನಲ್ಲಿಯೇ ಭಗವದ್ಗೀತೆ ಬರೆಯಲು ಅನುಕೂಲ ಆಗುವಂತೆ ತುಳು ಲಿಪಿಯಲ್ಲಿ ಭಗವದ್ಗೀತೆ ಮುದ್ರಣಕ್ಕೂ ಕ್ರಮ ವಹಿಸುತ್ತಿದ್ದೇವೆ. ಸದ್ಯ ಕನ್ನಡ ಭಗವದ್ಗೀತೆ ಪುಸ್ತಕ ಆಧರಿಸಿ ತುಳು ಲಿಪಿಯಲ್ಲಿ ಕೋಟಿ ಗೀತಾ ಲೇಖನ ಯಜ್ಞ ಬರೆಯಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜೈ ತುಳುನಾಡು ಉಡುಪಿ ಅಧ್ಯಕ್ಷೆ ಸುಶೀಲಾ ಜಯಕರ, ಜೊತೆ ಕಾರ್ಯದರ್ಶಿ ಸುಪ್ರೀತಾ ಪುತ್ರನ್, ಕೋಶಾಧಿಕಾರಿ ಸುಪ್ರಿಯಾ ಅಖಿಲೇಶ್ ದೇವಾಡಿಗ, ಉಪಾಧ್ಯಕ್ಷ ಕಿರಣ್ ಭಂಡಾರಿ ಉಪಸ್ಥಿತರಿದ್ದರು.