ಉಡುಪಿ: ಸಾಹಿತ್ಯವನ್ನು ಅಧ್ಯಯನ ಹಾಗೂ ಬೋಧಿಸುವ ಮೂಲಕ ನಮ್ಮಲ್ಲಿ ಭಾಷಾ ಕೌಶಲ ಸಿದ್ಧಿಸುತ್ತದೆ. ಅಲ್ಲದೆ, ಪರಿಣಾಮಕಾರಿಯಾದ ಭಾಷೆಯನ್ನು ಸಿದ್ಧಿಸಿಕೊಳ್ಳಲು ಕೂಡ ಅದು ಸಹಾಯ ಮಾಡುತ್ತದೆ ಎಂದು ಕುವೆಂಪು ಭಾಷಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಗಿರೀಶ್ ಭಟ್ ಹೇಳಿದ್ದಾರೆ.
ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಹಯೋಗದಲ್ಲಿ ನಗರದ ಎಂಜಿಎಂ ಕಾಲೇಜು ಆವರಣದಲ್ಲಿರುವ ಆರ್.ಆರ್.ಸಿ. ಯ ಧ್ವನ್ಯಲೋಕದಲ್ಲಿ ಶನಿವಾರ ನಡೆದ ಕೇಶವ ಪ್ರಶಸ್ತಿ 2025 ಪ್ರದಾನ ಸಮಾರಂಭದಲ್ಲಿ “ಹಳಗನ್ನಡ ಓದು: ಏಕೆ? ಹೇಗೆ” ವಿಷಯದ ಕುರಿತು ಉಪನ್ಯಾಸ ನೀಡಿದರು.
ಸಾಹಿತ್ಯದ ಮೂಲಕ ಭಾಷೆಯನ್ನು ಕಲಿಸಲು ಅವಕಾಶ ಮಾಡಿಕೊಡಬೇಕು. ಸಾಹಿತ್ಯವು ಭಾಷೆಯ ಬೇರೆ ಬೇರೆ ಶೈಲಿಗಳನ್ನು ಕಲಿಸಲು ಹಾಗೂ ಬಳಸಲು ಹೇಳಿಕೊಡುತ್ತದೆ. ಸಾಹಿತ್ಯದಲ್ಲಿ ಭಾಷೆಯ ಬಗೆ ಬಗೆಯ ಊರ್ಜಿಕರಣಗೊಳ್ಳುವ ಬೇರೆ ಬೇರೆ ರೂಪಗಳು ಸಿಗುತ್ತವೆ ಎಂದರು.
ಕೇಶವ ಪ್ರಶಸ್ತಿ ಸ್ವೀಕರಿಸಿದ ಸಾಹಿತಿ, ಕಲಾವಿದ ಡಾ. ರಮಾನಂದ ಬನಾರಿ ಮಾತನಾಡಿ, ಮೌಲ್ಯಗಳ ಸ್ಮರಣೆ, ವಿಸ್ತರಣೆ ಅತಿ ಮುಖ್ಯ. ಹೆತ್ತವರೆಲ್ಲ ತಾಯಂದಿರಲ್ಲ, ತಾಯ್ತನದ ಹೃದಯ ಉಳ್ಳವರು ನೈಜ ತಾಯಂದಿರು. ಸವಾಲುಗಳನ್ನು ಎದುರಿಸುವಲ್ಲಿ ಸಾಹಸ ಸಾಮರ್ಥ್ಯವಿದ್ದರೆ ಸಾಧನೆ ಸಾಧ್ಯ ಎಂದು ಹೇಳಿದರು.
ಮಾಹೆ ಕುಲಸಚಿವ ಡಾ. ಪಿ.ಗಿರಿಧರ್ ಕಿಣಿ ಮುಖ್ಯ ಅತಿಥಿಯಾಗಿದ್ದರು. ಎಂಜಿಎಂ ಕಾಲೇಜು ಪ್ರಿನ್ಸಿಪಾಲ್ ಪ್ರೊ.ವನಿತಾ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಆರ್.ಆರ್.ಸಿ.ಸಹ ಸಂಶೋಧಕ ಡಾ. ಅರುಣ್ ಕುಮಾರ್ ಎಸ್.ಆರ್.ಪ್ರಶಸ್ತಿ ಪುರಸ್ಕೃತರ ಕುರಿತು ಅಭಿನಂದನಾ ಮಾತುಗಳನ್ನಾಡಿದರು.
ಅನನ್ಯಾ ಎನ್.ಶಿವತ್ತಾಯ ಪ್ರಾರ್ಥಿಸಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಡಾ. ತಾಳ್ತಜೆ ವಸಂತ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

















