ಉಡುಪಿ: ಜನಜಾಗೃತಿ ಮೂಡಿಸುವ ಉದ್ದೇಶದಿಂದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯು ಶುಲ್ಕೆ ಕಂಪನಿಯ ಸಹಭಾಗಿತ್ವದೊಂದಿಗೆ ಮಂಗಳವಾರ ಜಾಗತಿಕ ಕೈ ತೊಳೆಯುವ ದಿನವನ್ನು ಆಚರಿಸಿತು.
ಈ ಜನಜಾಗೃತಿ ಕಾರ್ಯಕ್ರಮವು ಬೆಳಿಗ್ಗೆ 5ಗಂಟೆಗೆ ಆಸ್ಪತ್ರೆಯ ಹೊರರೋಗಿ ವಿಭಾಗದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಆರಂಭವಾಗಿ ಸಂಜೆ 5ಗಂಟೆಗೆ ಮುಕ್ತಾಯಗೊಂಡಿತು. ಮಣಿಪಾಲ, ಉಡುಪಿ ಮತ್ತು ಕಾರ್ಕಳ ಆಸ್ಪತ್ರೆಗಳಲ್ಲಿ ಏಕಕಾಲದಲ್ಲಿ ನಡೆದ ಕೈ ತೊಳೆಯುವ ಜಾಗೃತಿ ಕಾರ್ಯಕ್ರಮದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ಡೀನ್ ಡಾ. ಶರತ್ ಕೆ. ರಾವ್ ಮಾತನಾಡಿ, ಮನುಷ್ಯನಿಗೆ ಶೇ. 50ರಷ್ಟು ಉಸಿರಾಟದ ಕಾಯಿಲೆ ಮತ್ತು ಹೊಟ್ಟೆಯ ಸೋಂಕುಗಳು ನೈರ್ಮಲ್ಯದ ಸಮಸ್ಯೆಯಿಂದ ಬರುತ್ತಿದ್ದು, ಜನರಿಗೆ ಶುಚಿತ್ವದ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ 2008ರಿಂದ ಕೈ ತೊಳೆಯುವ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತಿದೆ ಎಂದರು.
ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮಾತನಾಡಿ, ರೋಗಿ ಮತ್ತು ಆರೈಕೆ ಮಾಡುವವರು ಕೈ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ಎಂದರು.
ಕೆಎಂಸಿಯ ಸಹ ಡೀನ್ ಡಾ. ಅನಿಲ್ ಭಟ್, ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ, ಶುಲ್ಕೆ ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು. ಆಸ್ಪತ್ರೆ ಸೋಂಕು ನಿಯಂತ್ರಣ ಸಮಿತಿಯ ಅಧ್ಯಕ್ಷ ಡಾ. ಕೆ. ವಂದನಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.