ಬರಹ-ಶ್ರೇಯಾ ಶಿವಪ್ರಕಾಶ್
ಈಗ ಸ್ತನ ಕ್ಯಾನ್ಸರ್ ತುಂಬಾ ಸಾಮಾನ್ಯವಾಗಿಬಿಟ್ಟಿದೆ. ನಮ್ಮ ನಿಮ್ಮ ನಡುವೆಯೇ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವವರನ್ನು ನೋಡಬಹುದಾಗಿದೆ. ಅಕ್ಟೋಬರ್ ತಿಂಗಳೆಂದರೆ ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳು. ಈ ಸಂದರ್ಭದಲ್ಲಿ ಹಲವೆಡೆ ಜಾಗೃತಿ ಕಾರ್ಯಕ್ರಮಗಳು, ಲೇಖನಗಳು, ವೀಡಿಯೋಗಳು ಹೊರಬರುತ್ತವೆ. ಸಾಂಕೇತಿಕವಾಗಿ ಪಿಂಕ್ ರಿಬ್ಬನ್ ಗಳು ಮಿಂಚುತ್ತವೆ. ಆದರೆ ಇದರ ಹಿಂದೊಂದು ಅರಿಯದ ಸತ್ಯವಿದೆ, ನಮ್ಮ ಸ್ತನಗಳೊಂದಿಗಿನ ನಮ್ಮ ಸಂಬಂಧವು ಹೆಚ್ಚಾಗಿ ಆರೋಗ್ಯ ಜಾಗೃತಿಗಿಂತ ಸೌಂದರ್ಯದ ಮಾನದಂಡಗಳಾಗಿದೆ, ಲೈಂಗಿಕತೆಯ ದ್ಯೋತಕವಾಗಿದೆ. ಆದರೆ ನಾವು ಅವುಗಳ ಆರೈಕೆ, ರಕ್ಷಣೆ ಮತ್ತು ಜಾಗೃತೆಯ ಯೋಚನೆ ಮಾಡುವುದು ಅತಿ ವಿರಳ.
ಸ್ತನಕ್ಯಾನ್ಸರ್ ಕುರಿತು ಒಂದಷ್ಟು ಮಾಹಿತಿ
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಪ್ರತಿ ವರ್ಷ ಸುಮಾರು 2.3 ಮಿಲಿಯನ್ ಜನರಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾಗುತ್ತಿದ್ದು, ಹೆಚ್ಚಿನ ಆದಾಯದ ದೇಶಗಳಲ್ಲಿ ಎಂಟು ಮಹಿಳೆಯರಲ್ಲಿ ಒಬ್ಬರು ಇದರಿಂದ ಬಳಲುತ್ತಿದ್ದಾರೆ. ಆರಂಭದಲ್ಲೆ ಪತ್ತೆ ಮತ್ತು ಉತ್ತಮ ಚಿಕಿತ್ಸೆಗಳಿಂದಾಗಿ ಬದುಕುಳಿಯುವವರ ಪ್ರಮಾಣ ಹೆಚ್ಚಿದ್ದರೂ ರೋಗದಿಂದ ಮಾನಸಿಕ, ಸಾಮಾಜಿಕ, ದೈಹಿಕವಾಗಿ ನರಳಾಟ ಅನಿವಾರ್ಯ. ಹಾಗಾಗಿ ರೋಗ ಬಂದ ನಂತರ ಚಿಕಿತ್ಸೆಯ ಕುರಿತು ಯೋಚಿಸುವುದಕ್ಕಿಂತ ತಡೆಗಟ್ಟುವಿಕೆ ಉತ್ತಮ.

ಸ್ತನ ಕ್ಯಾನ್ಸರ್ ತಡೆಗಟ್ಟಲು ಹೀಗೆ ಮಾಡಿ
ದಿನನಿತ್ಯದ ಜೀವನದಲ್ಲಿ ನಾವು ಅಳಡಿಸಿಕೊಳ್ಳುವ ಕೆಲವು ಸರಳ ಅಭ್ಯಾಸಗಳು ಸ್ತನ ಕ್ಯಾನ್ಸರ್ ನಿಂದ ದೂರವಿರಲು ಸಹಕರಿಸುತ್ತವೆ. ಜೀವನಶೈಲಿ ಮಾತ್ರವಲ್ಲದೇ ಪರಿಸರ ಸ್ನೇಹಿ, ನೈಸರ್ಗಿಕ ವಸ್ತುಗಳ ಬಳಕೆಯೂ ಸ್ತನಕ್ಯಾನ್ಸರ್ ನಿಂದ ದೂರವಿರಲು ಕಾರಣವಾಗುತ್ತವೆ. ಸೌಂದರ್ಯವರ್ಧಕಗಳು, ಪ್ಲಾಸ್ಟಿಕ್, ಶುಚಿಗೊಳಿಸುವ ಲಿಕ್ವಿಡ್ ಗಳಲ್ಲಿರುವ ರಾಸಾಯನಿಕಗಳೂ ಕ್ಯಾನ್ಸರ್ ಕಾರಕ.
• ದೇಹದ ತೂಕವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳುವುದು.
• ಪ್ರತಿದಿನ ಕನಿಷ್ಠ 20-30 ನಿಮಿಷಗಳ ವ್ಯಾಯಾಮ
• ಮದ್ಯಪಾನ, ಧೂಮಪಾನಗಳಿಂದ ದೂರವಿರುವುದು
• ಕನಿಷ್ಟ ಮಗುವಿಗೆ ಒಂದು ರ್ಷವಾಗುವವರೆಗೆ ಸ್ತನ್ಯಪಾನ ನೀಡುವುದು
• ನಿಯಮಿತ ಸ್ವಯಂ ಪರೀಕ್ಷೆಗಳು, ತಪಾಸಣೆಗಳು
• ಸುಗಂಧ-ಮುಕ್ತ, ರಾಸಾಯನಿಕ ಮುಕ್ತ ಉತ್ಪನ್ನಗಳ ಬಳಕೆ
• ಮೈಕ್ರೋವೇವ್ಡ್ ಪ್ಲಾಸ್ಟಿಕ್ಗಳ ಬಳಕೆಯನ್ನು ಕಡಿಮೆ ಮಾಡುವುದು
• ಸರಿಯಾದ ನಿದ್ರೆ ಮಾಡುವುದು, ರಾತ್ರಿ ಪಾಳಿ ಕೆಲಸವನ್ನು ನಿಯಂತ್ರಿಸುವುದು
ಸ್ತನ ಕ್ಯಾನ್ಸರ್ ನ ಕುರಿತು ಗಂಭೀರವಾಗಿ ಯೋಚಿಸಲೇಬೇಕಾದ ಅನಿವಾರ್ಯತೆ ನಮ್ಮೆದುರಿಗಿದೆ. ಕೇವಲ ಇದು ಮಹಿಳೆಯರಿಗೆ ಸಂಬಂಧಿಸಿದ್ದು ಎಂಬ ಯೋಚನೆಯಿಂದ ದೂರಸರಿದು, ಪುರುಷರೂ ನಾವೂ ತಾಯಿಯ ಸ್ತನ್ಯಪಾನ ಮಾಡಿಯೇ ಬೆಳೆದದ್ದು ಎಂಬ ಅಂಶವನ್ನು ತಲೆಯಲ್ಲಿಟ್ಟುಕೊಂಡು, ನಮ್ಮ ತಾಯಿ, ಹೆಂಡತಿ, ಮಗಳು, ಅಕ್ಕ-ತಂಗಿಯರ ಆರೋಗ್ಯದ ಕುರಿತು ಕಾಳಜಿವಹಿಸುವುದು ಬಹಳಾ ಅಗತ್ಯ. ಮುಜುಗರಕ್ಕೊಳಗಾಗಿಯೋ, ಹಣದ ಕಾರಣದಿಂದಲೋ ಮಹಿಳೆಯರು ತಮ್ಮ ಆರೋಗ್ಯದ ಕುರಿತು ನಿರ್ಲಕ್ಷಿಸುವ ಸಾಧ್ಯತೆ ಇದ್ದರೂ ಪುರುಷರು ಮಾನಸಿಕ ಧೈರ್ಯ ನೀಡಿ ರೋಗ ತಡೆಗಟ್ಟುವಿಕೆಗೆ ನಿಯಮಿತ ಪರೀಕ್ಷೆಗೆ ಪ್ರೋತ್ಸಾಹಿಸಲೇಬೇಕು.












