ಪ್ರೀತಿಯ ಹೆಸರಿನಲ್ಲಿ ತರಬೇತುದಾರನ ಕಿರುಕುಳವನ್ನು ಸಹಿಸಲಾಗದೆ ವಿದ್ಯಾರ್ಥಿನಿಯೊಬ್ಬಳು ಕೊನೆಯುಸಿರೆಳೆದಿರುವ ಆಘಾತಕಾರಿ ಘಟನೆ ಹೈದರಾಬಾದ್ನ ಲಾಲಾಗುಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಮೌಲಿ (19) ಎಂದು ಗುರುತಿಸಲಾಗಿದೆ. ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ಲಾಲಗುಡ ಇನ್ಸ್‌ಪೆಕ್ಟರ್ ರಘು ಬಾಬು ಅವರು ನೀಡಿರುವ ಮಾಹಿತಿ ಪ್ರಕಾರ, ಮೃತ ಮೌಲಿ, ನಿವೃತ್ತ ರೈಲ್ವೆ ಉದ್ಯೋಗಿ ಪ್ರಮೋದ್ ಕುಮಾರ್ ಅವರ ಪುತ್ರಿ. ಪ್ರಮೋದ್ ಕುಟುಂಬ ಲಾಲಾಪೇಟದ ಸಾಯಿಬಾಬಾ ದೇವಸ್ಥಾನದ ಬಳಿ ವಾಸಿಸುತ್ತಿದೆ. ಅವರಿಗೆ ಪತ್ನಿ, ಇಬ್ಬರು ಹೆಣ್ಣುಮಕ್ಕಳು ಮತ್ತು ಓರ್ವ ಪುತ್ರನಿದ್ದಾನೆ.
ಹಿರಿಯ ಮಗಳು ಮೌಲಿ ಅಲಿಯಾಸ್ ವೆನ್ನೆಲಾ, ತರ್ನಾಕದಲ್ಲಿರುವ ರೈಲ್ವೆ ಪದವಿ ಕಾಲೇಜಿನಲ್ಲಿ ಬಿಎ ಎರಡನೇ ವರ್ಷದಲ್ಲಿ ಓದುತ್ತಿದ್ದಳು. ಮಾಣಿಕೇಶ್ವರ ನಗರದ ಅಂಬಾಜಿ ಎಂಬ ಯುವಕ ಕೆಲವು ತಿಂಗಳ ಹಿಂದೆ ಅದೇ ಕಾಲೇಜಿನಲ್ಲಿ ವಾಲಿಬಾಲ್ ತರಬೇತುದಾರನಾಗಿ ಸೇರಿಕೊಂಡಿದ್ದಾನೆ. ಆತ, ಕಳೆದ ಕೆಲವು ದಿನಗಳಿಂದ, ಪ್ರೀತಿಯ ಹೆಸರಿನಲ್ಲಿ ಮೌಲಿಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಆಕೆ ತುಂಬಾ ಅಸಮಾಧಾನಗೊಂಡಿದ್ದಳು.
ಬುಧವಾರ (ಅ.08) ಸಂಜೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆಕೆ ಸಾವಿಗೆ ಶರಣಾಗಿದ್ದಾಳೆ. ಮಾಹಿತಿ ಪಡೆದ ಪೊಲೀಸರು ಸ್ಥಳವನ್ನು ತಲುಪಿ, ಪರಿಶೀಲನೆ ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.ಮೃತರ ಕುಟುಂಬ ಸದಸ್ಯರ ದೂರಿನ ಆಧಾರದ ಮೇಲೆ, ಅಂಬಾಜಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಇದರ ನಡುವೆ ಮೃತ ಮೌಲಿಯ ಸೆಲ್‌ಫೋನ್‌ನಲ್ಲಿದ್ದ ಡೇಟಾವನ್ನು ಸಂಪೂರ್ಣವಾಗಿ ಡಿಲೀಟ್ ಮಾಡಲಾಗಿದೆ.
ಹೀಗಾಗಿ ಡೇಟಾವನ್ನು ರಿಟ್ರೈವ್ ಮಾಡು ಪ್ರಯತ್ನ ನಡೆಯುತ್ತಿದೆ. ಆರೋಪಿ ಅಂಬಾಜಿ ಪ್ರಸ್ತುತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಇನ್ಸ್‌ಪೆಕ್ಟರ್ ರಘು ಬಾಬು ಹೇಳಿದ್ದಾರೆ.
















