ಬಂಟಕಲ್:ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮ

ಉಡುಪಿ, ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ
ಮಹಾವಿದ್ಯಾಲಯದ ಪ್ರಸಕ್ತ ಸಾಲಿನ ಪ್ರಥಮ ವರ್ಷದ ಇಂಜಿನಿಯರಿಂಗ್ ಶಿಕ್ಷಣಕ್ಕೆ ಸೇರ್ಪಡೆಗೊಂಡ ವಿದ್ಯಾರ್ಥಿಗಳ ‘ಮಾರ್ಗದರ್ಶನ ಕಾರ್ಯಕ್ರಮ’ವು ದಿನಾಂಕ 05 ಅಕ್ಟೋಬರ್ 2025ರ ಭಾನುವಾರದಂದು ವಿದ್ಯಾಲಯದ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು.

ಉಡುಪಿ ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ದೀಪ ಬೆಳಗಿಸುವ ಮೂಲಕ
ಕಾರ್ಯಕ್ರಮವನ್ನು ಉದ್ಘಾಟಿಸಿದರು ಮತ್ತು ಸಮಾರಂಭದ
ಅಧ್ಯಕ್ಷತೆ ವಹಿಸಿದ್ದರು. ಅವರು ತಮ್ಮ ಆಶೀರ್ವಚನದಲ್ಲಿ ವಿದ್ಯಾರ್ಥಿಗಳು
ತಮ್ಮ ಆಸಕ್ತಿಯ ಕ್ಷೇತ್ರದ ಮೇಲೆ ಗಮನವನ್ನು ಕೇಂದ್ರೀಕರಿಸಿ
ವೃತ್ತಿ ಜೀವನದಲ್ಲಿ ಶ್ರೇಷ್ಠತೆಯನ್ನು ಸಾಧಿಸುವಂತೆ ಮಾರ್ಗದರ್ಶನ
ಮಾಡಿದರು.

ಈ ಸಮಾರಂಭದಲ್ಲಿ ಮುಖ್ಯ ಅಥಿಗಳಾಗಿ ಬೆಂಗಳೂರಿನ ಲೀಪ್ ಫ್ರಾಗ್
ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಪ್ರಭವ್ ಎನ್ ರಾವ್ ಇವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿ ತಮ್ಮ ಯಶಸ್ವಿ ಉದ್ಯಮಶೀಲತೆಯ ಪ್ರಯಾಣದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ ವಿದ್ಯಾರ್ಥಿಗಳು ಕೂಡ ಭವಿಷ್ಯದಲ್ಲಿ ಯಶಸ್ವಿ ಉದ್ಯಮಿಯಾಗಲು ಶ್ರಮಿಸುವಂತೆ ಪ್ರೇರೆಪಿಸಿದರು.

ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷರಾದ ಶ್ರೀ ಪಿ ಶ್ರೀನಿವಾಸ ತಂತ್ರಿಯವರು ಸಮಾರಂಭದ ಗೌರವ ಅತಿಥಿಗಳಾಗಿ
ಭಾಗವಹಿಸಿದ್ದರು. ಇನ್ನೋರ್ವ ಗೌರವ ಅತಿಥಿಗಳಾದ ಸಂಸ್ಥೆಯ
ಕಾರ್ಯದರ್ಶಿ ರತ್ನಕುಮಾರ್ ಇವರು ಮಾತನಾಡಿ ಸಂಸ್ಥೆಯ ಮೇಲೆ
ನಂಬಿಕೆ ಮತ್ತು ವಿಶ್ವಾಸ ಹೊಂದಿದ್ದಕ್ಕಾಗಿ ಪೋಷಕರು ಮತ್ತು
ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿಗಳು ಸಂಸ್ಥೆಯ
ಶೈಕ್ಷಣಿಕ ಸೌಲಭ್ಯಗಳ ಸಂಪೂರ್ಣ ಪ್ರಯೋಜನ ಪಡೆಯಲು
ಕರೆನೀಡಿದರು.

ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾ
ಅಧಿಕಾರಿಗಳಾದ ಡಾ. ರಾಧಾಕೃಷ್ಣ ಎಸ್ ಐತಾಳ್ ಇವರು ಮಾತನಾಡಿ ಸಂಸ್ಥೆಯ ಬೆಳವಣಿಗೆಯ ಬಗ್ಗೆ ವಿವರಿಸಿದರು ಮತ್ತು ಸಂಸ್ಥೆಯು ವಿದ್ಯಾರ್ಥಿಗಳ ಅಭಿವೃದ್ಧಿಗೆ ನಿರಂತರ ಬೆಂಬಲ ನೀಡುವ ಬಗ್ಗೆ ಭರವಸೆ ನೀಡಿದರು.

ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್
ಸ್ವಾಗತಿಸಿದರು. ಶೈಕ್ಷಣಿಕ ವಿಭಾಗದ ಡೀನ್ ಡಾ. ನಾಗರಾಜ್ ಭಟ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಕಾಲೇಜಿನಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳು ಮತ್ತು ಶೈಕ್ಷಣಿಕ ಪಠ್ಯಕ್ರಮದ ಮಾರ್ಗಸೂಚಿಯ ಬಗ್ಗೆ ತಿಳಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಪ್ರಥಮ ವರ್ಷದ ಬಿ.ಇ. ಕೋರ್ಸ್ನ
ಸಂಯೋಜಕರಾದ ಡಾ. ಲೊಲಿಟ ಪ್ರಿಯ ಕ್ಯಾಸ್ತಲಿನೊ ವಂದಿಸಿದರು. ಈ
ಸಂದರ್ಭದಲ್ಲಿ ಸಿಇಟಿಯಲ್ಲಿ ಉತ್ತಮ ರ‍್ಯಾಂಕ್ ಪಡೆದ ವಿದ್ಯಾಸಂಸ್ಥೆಯ
ಮೂವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಹರೀಶ್
ಬೆಳ್ಮಣ್, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಮತ್ತು ಸಂಸ್ಥೆಯ ಡೀನ್‌ಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಸಾಯನ ಶಾಸ್ತ್ರ ವಿಭಾಗದ
ಮುಖ್ಯಸ್ಥೆಯಾದ ಡಾ. ಸುಬ್ಬುಲಕ್ಷ್ಮಿ ಎನ್ ಕಾರಂತ್ ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು. ಪ್ರಾಧ್ಯ್ಯಾಪಕರಾದ ಶ್ರೀ ಕಾರ್ತಿಕ್ ಮತ್ತು ಶ್ರೀಮತಿ ಆಶ್ರಿತಾ
ಕಾರ್ಯಕ್ರಮವನ್ನು ನಿರೂಪಿಸಿದರು.