ವಂದೇ ಮಾತರಂ‌: ವೀಡಿಯೋ ಹಾಡು ಮೂಲಕ ಪ್ಲಾಸ್ಟಿಕ್ ದುಷ್ಪರಿಣಾಮ: ಸ್ವಚ್ಛತೆಯ‌ ಅರಿವು  

ಉಡುಪಿ: ಪ್ಲಾಸ್ಟಿಕ್‌ ಬಳಕೆಯಿಂದ ಆಗುತ್ತಿರುವ ದುಷ್ಪರಿಣಾಮ ಹಾಗೂ ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್‌ ಹಾಗೂ ಲೈಫ್‌ ಲೈಕ್‌ ಪ್ರೊಡಕ್ಷನ್‌ ಜಂಟಿಯಾಗಿ ‘ವಂದೇ ಮಾತರಂ’ ವಿಡಿಯೋ ಹಾಡೊಂದನ್ನು ತಯಾರಿಸಿದ್ದು, ಈ ಹಾಡಿಗೆ ಸಾಮಾಜಿಕ ಜಾಲತಾಣದಲ್ಲಿ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಭೂದೇವಿ ಪ್ಲಾಸ್ಟಿಕ್‌ ಸುಳಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿರುವ ಕಥಾ ಹಂದರವನ್ನು ಇಟ್ಟುಕೊಂಡು ಹಾಡನ್ನು ಚಿತ್ರಕರಿಸಲಾಗಿದ್ದು, ಇದಕ್ಕೆ ವಂದೇ ಮಾತರಂ ಹಾಡನ್ನು ಬಳಸಿಕೊಳ್ಳಲಾಗಿದೆ. 3.4 ನಿಮಿಷ ಅವಧಿಯ ಈ ಹಾಡಿನಲ್ಲಿ ಭೂಮಿ ಕಾಯುವ ದೈವ ಮರೆಯಾದ‌ ಭೂಮಿಯ ಸೌಂದರ್ಯವನ್ನು ಹುಡುಕುತ್ತಾ ಪ್ಲಾಸ್ಟಿಕ್‌ ಎಂಬ ರಕ್ಕಸನೊಂದಿಗೆ ಹೋರಾಡುವ
ಸನ್ನಿವೇಶವನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್‌ನ ಡಾ. ರಶ್ಮಿ ಕುಂದಾಪುರ, ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್‌ ಎಂಬ ಸಮಾನ ಮನಸ್ಕರ ತಂಡವೊಂದು ಕಳೆದ 33 ವಾರಗಳಿಂದ ಕುಂದಾಪುರ ಕಡಲ ಕಿನಾರೆಯ ಸ್ವಚ್ಛತೆಯನ್ನು ಮಾಡಿ, ಪ್ಲಾಸ್ಟಿಕ್‌ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದೆ. ಮೂರು ಜನರಿಂದ ಆರಂಭಗೊಂಡ ಈ ತಂಡದಲ್ಲಿ ಈಗ 33 ಮಂದಿ ಇದ್ದಾರೆ. ಈಗಾಗಲೇ ಗೋಪಾಡಿ, ಕೋಡಿ, ಕುಂಬಾಡಿ, ಕೋಟೇಶ್ವರ, ಮಾಬುಕಲ ಹೀಗೆ ಕಡಲ ಕಿನಾರೆಯಲ್ಲಿ ಸ್ವಚ್ಛತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ಲಾಸ್ಟಿಕ್‌ ಜನಜಾಗೃತಿಯನ್ನು ದೊಡ್ಡಮಟ್ಟದಲ್ಲಿ ಜನರಿಗೆ ತಲುಪಿಸುವ ಉದ್ದೇಶದಿಂದ ಈ ವಿಡಿಯೋ ಹಾಡನ್ನು ತಯಾರಿಸಲಾಗಿದೆ ಎಂದರು.
ಮೂರು ದಿನಗಳ ಹಿಂದೆ ಈ ಹಾಡನ್ನು ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಲಾಗಿದ್ದು, ಈವರೆಗೆ‌ 16 ಸಾವಿರ ಮಂದಿ ವಿಡಿಯೋವನ್ನು ವೀಕ್ಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಾಡಿಗೆ‌ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಕಲಾವಿದರಾಗಿ ಶ್ರುತಿ ಜೈನ್ ರೆಂಜಾಳ, ಸತ್ಯನಾರಾಯಣ‌ ಮಂಜ‌ ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಪ್ರಾಜೆಕ್ಟ್‌ನ ಸತ್ಯನಾರಾಯಣ ಮಂಜ ಮಾತನಾಡಿ, ಈ ಹಾಡಿನಲ್ಲಿ ದೈವದ ಪಾತ್ರ ಚಿತ್ರಿಸಿರುವುದಕ್ಕೆ ಮತ್ತು ವಂದೇ ಮಾತರಂ ಹಾಡನ್ನು ಬಳಸಿಕೊಂಡದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಕೆಲ ಆಕ್ಷೇಪಣೆಗಳು ಬಂದಿವೆ. ಆದರೆ ನಾವು ಈ ಹಾಡಿನಲ್ಲಿ ಸಂಪ್ರದಾಯಕ್ಕೆ ಧಕ್ಕೆಯಾಗುವಂತಹ ಕೆಲಸ ಮಾಡಿಲ್ಲ. ತುಳುನಾಡಿನ ಆರಾಧನೆ ದೈವವನ್ನು ಭೂಮಿ ತಾಯಿಯನ್ನು ಕಾಯುವ ದೈವದಂತೆ ಚಿತ್ರಿಸಿದ್ದೇವೆ. ಇದೊಂದು ಕಾಲ್ಪನಿಕ ವೇಷ. ಹಾಗೆಯೇ ವಂದೇ ಮಾತರಂ ಭೂಮಿ ಗೀತೆಯೂ ಆಗಿದೆ. ಟೀಕಿಸುವ ಮೊದಲು ಇದನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿಕೊಂಡಿದ್ದೇವೆ ಎನ್ನುವುದನ್ನು ಅರ್ಥೈಸಿಕೊಳ್ಳಬೇಕು ಎಂದರು.
ಗೋಷ್ಠಿಯಲ್ಲಿ ಸಂಗೀತ ನಿರ್ದೇಶಕರಾದ ಡೆನಿಯಲ್‌ ಮತ್ತು ಸುಹೀತ್‌, ಅಕ್ಷತಾ ಹಾವಂಜೆ, ನಿರ್ಮಾಪಕ ಚಂದ್ರಕಾಂತ್‌ ಶೆಣೈ ಇದ್ದರು.