ಕೋಳಿ ಅಂಕ ಬಗ್ಗೆ ಅವಹೇಳನಕಾರಿ ಹೇಳಿಕೆ- ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಕೂಡಲೇ ಕ್ಷಮೆ ಯಾಚಿಸಲಿ

ಉಡುಪಿ: ತುಳುನಾಡಿನ ದೈವಾರಾಧನೆಯ ಭಾಗವಾದ ಕೋಳಿ ಅಂಕದ ಆಚರಣೆ ಬಗ್ಗೆ ಕಾಂಗ್ರೆಸ್ ಮುಖಂಡ ಪ್ರಸಾದ್ ಕಾಂಚನ್ ಅವಹೇಳನಕಾರಿ ಹೇಳಿಕೆ ನೀಡಿದ್ದು , ತುಳುನಾಡಿನ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ.ಈ ಬಗ್ಗೆ ಅವರು ಬಹಿರಂಗ ಕ್ಷಮೆ ಯಾಚನೆ ಮಾಡಬೇಕು ಎಂದು ತುಳುನಾಡ ಧರ್ಮ ಜಾಗರಣ ವೇದಿಕೆ ಒತ್ತಾಯ ಮಾಡಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಉಡುಪಿ ಜಿಲ್ಲಾ ಪ್ರಮುಖ್ ಉದಯಕುಮಾರ್ ಹಿರಿಯಡಕ ಅವರು, ಕಳೆದ ಮಂಗಳವಾರ ಬ್ರಹ್ಮಾವರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಪ್ರಸಾದ್ ಕಾಂಚನ್ ಸ್ಥಳೀಯ ಶಾಸಕರನ್ನು ಟೀಕಿಸುವ ವೇಳೆ ಉಡುಪಿಯ ಶಾಸಕರು ತುಳುನಾಡಿನ ಧಾರ್ಮಿಕ ಆಚರಣೆಯ ಭಾಗವಾದ ಸಾಂಪ್ರದಾಯಿಕ ಕೋಳಿ ಅಂಕ ಆಚರಣೆಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುವ ಮೂಲಕ ಶಾಸಕರು ಉಡುಪಿ ಜಿಲ್ಲೆಗೆ ಅವಮಾನ ಮಾಡಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ ಎಂದರು.

ಪ್ರಸಾದ್ ಕಾಂಚನ್ ಈ ಹೇಳಿಕೆಯಿಂದ ತುಳುನಾಡಿನ ದೈವಾರಾಧನೆಯ ಚೌಕಟ್ಟಿನ ರಕ್ತಹಾರದ ಕಲ್ಪನೆಯಲ್ಲಿ ಅನಾದಿಕಾಲದಿಂದಲೂ ನಡೆಸಿಕೊಂಡು ಬಂದಂತಹ ಕೋಳಿ ಅಂಕ ಒಂದು ಜೂಜು ಎಂಬಂತೆ ಬಿಂಬಿಸಿ ನಮ್ಮ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಪ್ರಸಾದ್ ಕಾಂಚನ್ ಈ ಅಪ್ರಬುದ್ಧ ಅವಹೇಳನಕಾರಿ ಹೇಳಿಕೆಯಿಂದ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆಯಾಗಿದ್ದು, ತಕ್ಷಣ ತಮ್ಮ ಹೇಳಿಕೆಯನ್ನು ಹಿಂಪಡೆದು ಬೇಷರತ್ತಾಗಿ ಕ್ಷಮೆಯಾಚಿಸಬೇಕು. ಇನ್ನಾದರೂ ತುಳುನಾಡಿನ ಧಾರ್ಮಿಕ ಆಚರಣೆಯ ಬಗ್ಗೆ ಹೇಳಿಕೆ ನೀಡುವಾಗ ಜಾಗೃತೆ ವಹಿಸಲಿ. ಇದೇ ಪ್ರವೃತ್ತಿ ಮುಂದುವರಿಸಿದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ಪ್ರಮುಖ್ ಧರ್ಮೆಂದ್ರ ಎಂಪಿ, ಜಿಲ್ಲಾ ಸಂಘಟನ ಪ್ರಮುಖ್ ಅರುಣ್ ಕುಂದರ್, ಸಹ ಸಂಘಟನ ಪ್ರಮುಖ್ ಶರತ್ ಕೆಮ್ಮಣ್ಣು ಇದ್ದರು.