ಸೆ. 24ರಿಂದ 26: ಉಡುಪಿಯಲ್ಲಿ ‘ರಂಗತೇರು’ ನಾಟಕೋತ್ಸವ

ಉಡುಪಿ: ರಂಗಭೂಮಿ ಉಡುಪಿ ಹಾಗೂ ರಂಗಾಯಣ ಶಿವಮೊಗ್ಗದ ಸಂಯುಕ್ತ ಆಶ್ರಯದಲ್ಲಿ ‘ರಂಗತೇರು’ ನಾಟಕೋತ್ಸವ ಸೆ. 24ರಿಂದ 26ರ ವರೆಗೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ
ಮಂಟಪದಲ್ಲಿ ನಡೆಯಲಿದೆ ಎಂದು ರಂಗಭೂಮಿ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ  ಹೇಳಿದರು.

ಸೆ. 24ರಂದು ಸಂಜೆ 6ಗಂಟೆಗೆ ಉದಯಕುಮಾರ್‌ ಶೆಟ್ಟಿ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಕೆ.ಉದಯಕುಮಾರ್‌ ಶೆಟ್ಟಿ, ನಾಟಕೋತ್ಸವಕ್ಕೆ ಚಾಲನೆ ನೀಡುವರು. ಹಿರಿಯ ಸಂಗೀತ ವಿದ್ವಾಂಸ ಟಿ. ರಂಗ ಪೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬಳಿಕ ಪ್ರೊ. ಅರವಿಂದ ಮಾಲಗತ್ತಿಯವರ ಅತ್ಮಕಥೆ ಆಧಾರಿತ ‘ಗೌರ್ಮೆಂಟ್‌ಬ್ರಾಹ್ಮಣ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

ಸೆ. 25ರಂದು ಸಂಜೆ 6ಗಂಟೆಗೆ ‘ಇದಕ್ಕೆ ಕೊನೆ ಎಂದು..?’ ನಾಟಕದ ಪ್ರದರ್ಶನ ನಡೆಯಲಿದೆ.
ಸೆ. 26ರಂದು ಸಂಜೆ 6 ಗಂಟೆಗೆ ನಾಟಕೋತ್ಸವದ ಸಮಾರೋಪ ಜರುಗಲಿದ್ದು, ಸಂಸ್ಕೃತಿ ಚಿಂತಕಿ ಬನ್ನಂಜೆ ವಿನಯ ಆಚಾರ್ಯ ಸಮಾರೋಪ ಭಾಷಣ ಮಾಡುವರು. ಬಳಿಕ ‘ಮೆರವಣಿಗೆ’ ನಾಟಕ
ಪ್ರದರ್ಶನಗೊಳ್ಳಲಿದೆ. ಕಲಾಸಕ್ತರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ರಂಗಭೂಮಿ ಉಪಾಧ್ಯಕ್ಷ ಎಂ. ನಂದಕುಮಾರ್‌, ಜಂಟಿ ಕಾರ್ಯದರ್ಶಿ ಭಾಸ್ಕರ್‌ ರಾವ್‌ ಕಿದಿಯೂರು, ಕೋಶಾಧಿಕಾರಿ ರಾಜೇಶ್‌ ಭಟ್‌ ಪಣಿಯಾಡಿ, ಸದಸ್ಯ ಶ್ರೀಪಾದ್‌ ಹೆಗಡೆ ಇದ್ದರು.