ಹೊಸದಿಲ್ಲಿ: ಭಾರತ ಹಾಗೂ ನೇಪಾಲ ನಡುವೆ ಪೆಟ್ರೋಲಿಯಂ ಪೈಪ್‌ಲೈನ್‌ ಉದ್ಘಾಟನೆ

ಹೊಸದಿಲ್ಲಿ: ದಕ್ಷಿಣ ಏಷ್ಯಾದ ಮೊದಲ ಗಡಿಯಾಚೆಗಿನ ಪೆಟ್ರೋಲಿಯಂ ಉತ್ಪನ್ನಗಳ ಪೈಪ್​ಲೈನ್​ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳದ ಪ್ರಧಾನಿ ಕೆ.ಪಿ. ಒಲಿ ಮಂಗಳವಾರ ಜಂಟಿಯಾಗಿ ಉದ್ಘಾಟಿಸಿದ್ದಾರೆ.

ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆಗಾಗಿ ಎರಡು ರಾಷ್ಟ್ರಗಳ ನಡುವೆ ಇದೇ ಮೊದಲ ಬಾರಿಗೆ ಪೈಪ್‌ಲೈನ್‌ ನಿರ್ಮಾಣ ಮಾಡಲಾಗಿದೆ.  ಭಾರತದ ಬಿಹಾರದ ಮೋತಿಹಾರಿ ಹಾಗೂ ನೇಪಾಳದ ಅಮ್ಲೆಖ್​ಗಂಜ್ ನಡುವಿನ 60 ಕಿಮೀ ಉದ್ದದ ಪೆಟ್ರೋಲಿಯಂ ಉತ್ಪನ್ನಗಳ ಪೈಪ್​ಲೈನ್ ಯೋಜನೆ ಜಾರಿಗೊಂಡಿರುವುದರಿಂದ ನೇಪಾಳದಲ್ಲಿ ಇಂಧನ ಬೆಲೆ ತಗ್ಗಲಿದೆ.

ಇಂಡಿಯನ್‌ ಆಯಿಲ್ ಕಾರ್ಪೋರೇಷನ್‌ ಲಿ. 324 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಪೂರ್ಣಗೊಳಿಸಿದೆ. ಅದಕ್ಕೆ ನೇಪಾಲ ಸರಕಾರದ ನೇಪಾಲ ಆಯಿಲ್ ಕಾರ್ಪೊರೇಷನ್‌ ನೆರವು ನೀಡಿದೆ. 2014ರ ಆಗಸ್ಟ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಅಮ್ಲೇಖ್‌ಗುಂಜ್‌ನಲ್ಲಿ ಹೆಚ್ಚುವರಿ 75 ಕೋಟಿ ರೂ. ವೆಚ್ಚದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಸಂಗ್ರಹಿಸುವ ಡಿಪೋ ನಿರ್ಮಿಸಲು ನೇಪಾಲ ಒಪ್ಪಿಕೊಂಡಿದೆ.