ಉಡುಪಿ: ಸಾಲು ಸಾಲಾಗಿ ಕೆಂಪುದೀಪದ ಕಾರುಗಳು. ಝೆಡ್ ಪ್ಲಸ್ ಭದ್ರತೆ, ರಸ್ತೆ ಸಂಚಾರ ಬಂದ್….! ಹೀಗೆ ದೆಂದೂರುಕಟ್ಟೆ ಬಳಿ ಸೋಮವಾರ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಾರ್ವಜನಿಕರು ಏನಾಗುತ್ತಿದೆ ಎಂದು ಅಚ್ಚರಿಯಿಂದ ವೀಕ್ಷಿಸುತ್ತಿರುವಾಗಲೇ ನರೇಂದ್ರ ಮೋದಿ ಅವರು ಕಾರಿನಿಂದ ಇಳಿದಿದ್ದಾರೆ.
ದೆಂದೂರ್ಕಟ್ಟೆಯಲ್ಲಿ ಸೋಮವಾರ ಆಯೋಜಿಸಿದ ಗಣೇಶೋತ್ಸವ ಸಮಾರಂಭದಲ್ಲಿ ಹೀಗೆ ಮೋದಿ ಪ್ರತ್ಯಕ್ಷವಾಗಿದ್ದಾರೆ. ಅಸಲಿಗೆ ಬಂದಿದ್ದು ಪ್ರಧಾನಿ ನರೇಂದ್ರ ಮೋದಿಯಲ್ಲ, ಮೋದಿಯವರನ್ನೇ ಹೋಲುವ ವೇಷಧಾರಿ ಹಿರಿಯಡ್ಕದ ಸದಾನಂದ ನಾಯಕ್.
ಕಾರಿನಿಂದ ಕೆಳಗಿಳಿದ ಈ ಮೋದಿ ವೇಷಧಾರಿ ಸದಾನಂದ ನಾಯಕ್ ಎಲ್ಲರತ್ತ ಕೈಬೀಸುತ್ತಾ ಗಣೇಶೋತ್ಸವದ ವೇದಿಕೆ ಹತ್ತಿ ದೇವರಿಗೆ ಹೂ ಸಮರ್ಪಣೆ ಮಾಡಿದ್ದಾರೆ. ಆದರೆ ಗಣ್ಯರು ಭೇಟಿ ನೀಡುವ ಸಂದರ್ಭ ಕೈಗೊಳ್ಳಲಾಗುವ ಭದ್ರತಾ ವ್ಯವಸ್ಥೆಯ ಅಣಕು ಪ್ರದರ್ಶನ ಮಾತ್ರ ಗಣೇಶೋತ್ಸವಕ್ಕೆ ಸೇರಿದ ಸಾರ್ವಜನಿಕರಿಗೆ ಭರ್ಜರಿ ಮನರಂಜನೆ ನೀಡಿದೆ.












