ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಇದರ ವತಿಯಿಂದ ಪ್ರಭಾವತಿ ಹಾಗೂ ಉಡುಪಿ ವಿಶ್ವನಾಥ್ ಶೆಣೈ ಪ್ರಾಯೋಜಿತ ‘ವಿಶ್ವಪ್ರಭಾ ಪುರಸ್ಕಾರ – 2025’ನ್ನು ತುಳು ಹಾಗೂ ಕನ್ನಡ ಚಲನಚಿತ್ರ ಮತ್ತು ರಂಗಭೂಮಿಯ ಪ್ರಸಿದ್ಧ ಕಲಾವಿದ ನವೀನ್ ಡಿ ಪಡೀಲ್ ಅವರಿಗೆ ನೀಡಿ ಪುರಸ್ಕರಿಸಲಾಗುವುದು.
ಈ ಪುರಸ್ಕಾರವು ಪ್ರಶಸ್ತಿ ಪತ್ರ, ಫಲಕ ಹಾಗೂ ಒಂದು ಲಕ್ಷ ರೂಪಾಯಿ ನಗದು ಒಳಗೊಂಡಿರುತ್ತದೆ.
ಇದೇ ಬರುವ ಫೆಬ್ರವರಿಯಂದು ಉಡುಪಿಯ ಯಕ್ಷಗಾನ ಕಲಾರಂಗದ ಐ ವೈ ಸಿ ಸಭಾಂಗಣದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ವಿಶ್ವಪ್ರಭಾ ಪುರಸ್ಕಾರ ಸಮಿತಿಯ ಸಂಚಾಲಕ ಮರವಂತೆ ನಾಗರಾಜ ಹೆಬ್ಬಾರ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿರುತ್ತಾರೆ.
ಇದೇ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿಶ್ವಪ್ರಭಾ ಪುರಸ್ಕಾರದ ಪ್ರಾಯೋಜಕರು ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ಉಡುಪಿ ವಿಶ್ವನಾಥ್ ಶೆಣಿೈ, ಉಪಾಧ್ಯಕ್ಷರಾದ ಸಂಧ್ಯಾ ಶೆಣೆೈ, ವಿಘ್ನೇಶ್ವರ ಅಡಿಗ, ಹಾಗೂ ಸಂಚಾಲಕರಾದ ರವಿರಾಜ್ ಎಚ್.ಪಿ ಉಪಸ್ಥಿತರಿದ್ದರು.
ನವೀನ್ ಡಿ. ಪಡಿಲ್:
ಜನನ: 11 ನವೆಂಬರ್ 1969 ರಂಗಭೂಮಿ ಮತ್ತು ಚಲನಚಿತ್ರ ನಟರಾಗಿದ್ದು, ತುಳು ಭಾಷೆಯಲ್ಲಿ 15 ಸಾವಿರಕ್ಕೂ ಹೆಚ್ಚು ನಾಟಕ ಪ್ರದರ್ಶನಗಳಲ್ಲಿ ನಟಿಸಿದ್ದಾರೆ.”ಮಾಸ್ಟರ್ ಆಫ್ ಕಾಮೆಡಿ ಅಂಡ್ ಟ್ರಾಜಿಡಿ” ನಂತಹ ನಟನಾ ಪ್ರದರ್ಶನಗಳಿಂದ ತುಳು ರಂಗಭೂಮಿ ವಲಯಗಳಲ್ಲಿ ವ್ಯಾಪಕವಾಗಿ ಪ್ರಸಿದ್ಧರಾಗಿರುವ ಇವರನ್ನು “ಕುಸಲ್ದ ಅರಸೆ” (ತಮಾಶೆಯ ರಾಜ) ಎಂದು ಕರೆಯುತ್ತಾರೆ.
ಹಾಸ್ಯಮಯ ಪಾತ್ರಗಳಲ್ಲಿ ಮುಖ್ಯವಾಗಿ ಇವರು ನಟಿಸಿದ್ದು, ದೇವದಾಸ್ ಕಾಪಿಕಾಡ್ ಮತ್ತು ಚಿತ್ರನಟ ಆನಂದ್ ಬೋಳಾರ್ ಜೊತೆ ಸೇರಿ ‘ಚಾ ಪರ್ಕ’ಎಂಬ ತುಳು ನಾಟಕ ತಂಡದ ಮೂಲಕ 1990 ಮತ್ತು 2000ರ ದಶಕದ ಆರಂಭದಲ್ಲಿ ತುಳು ಹಾಸ್ಯಮಯ ನಾಟಕಗಳಲ್ಲಿ ಕಾಣಿಸಿಕೊಂಡಿರುತ್ತಾರೆ.
ಪ್ರಸಿದ್ಧ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ರವರ ನಿರ್ದೇಶನದಲ್ಲಿ 1993 ರ ಮಲಯಾಳಂ ಚಿತ್ರ ವಿಧೇಯನ್ ಚಲನಚಿತ್ರದಲ್ಲಿ ಮಮ್ಮೂಟ್ಟಿಯವರ ಜೊತೆಗೆ ಅಭಿನಯಿಸುವ ಮೂಲಕ ಹಿರಿತೆರೆಗೆ ಕಾಲಿಟ್ಟ ಪಡೀಲ್, 2024ರತನಕ ನೂರಾರು ಕನ್ನಡ ಮತ್ತು ತುಳು ಸಿನೆಮಾದಲ್ಲಿ ಬಣ್ಣಹಚ್ಚಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ವಾರಾಂತ್ಯದಲ್ಲಿ ಪ್ರಸಾರವಾಗುವ ಸೃಜನ್ ಲೋಕೇಶ್ ನೇತೃತ್ವದ ‘ಮಜಾ ಟಾಕಿಸ್’ ಹಾಸ್ಯ ಕಾರ್ಯಕ್ರಮದ ಪ್ರದಾನ ಪಾತ್ರದಲ್ಲಿ (ಗುಂಡು ಮಾಮ) ಕಾಣಿಸಿಕೊಂಡರು.
ಇವರು ಬಿರ್ಸೆ, ರಂಗ್, ಓರಿಯಾರ್ದ್ ಒರಿ ಅಸಲ್, ತೆಲಿಕೆದ ಬೊಲ್ಲಿ, ಚಾಲಿ ಪೋಲಿಲು, ಪಿಲಿಬೈಲ್ ಯಮುನಕ್ಕ, ಏಸ, ಚಂಡಿಕೋರಿ, ಏರೆಗಾವುಯೆ ಕಿರಿಕಿರಿ, ಇಂಗ್ಲೀಷ್, ಮಗನೆ ಮಹಿಷಾ, ಸರ್ಕಸ್, ಕುಡ್ಲ ಕೆಫೆ, ಜೈ, ರಾಜ್ ಸೌಂಡ್ ಎಂಡ್ ಲೈಟ್, ಲವ್ ಮಾಕ್ಟೈಲ್, ಗೌಜಿ ಗಮ್ಮತ್, ಗೋಸ್ಮಾರಿ ಫಾಮಿಲಿ, ಜೀಟಿಗೆ, ಕುರೆಪಟ್, ಗಂಟ್ ಕಲ್ವೆರ್, ಮೊದಲಾದ ಜನಪ್ರಿಯ ತುಳು ಚಲನಚಿತ್ರಗಳಲ್ಲಿ ಹಾಗೂ ಐ, ಶುಗರ್ ಲೆಸ್, ಅಪರಾಧಿ ನಾನಲ್ಲ, ಕನ್ನಡ ಚಲನಚಿತ್ರದಲ್ಲೂ ಮಾತ್ರವಲ್ಲದೆ ಮೂಗಜ್ಜನ ಕೋಳಿ ಎಂಬ ಅರೆಭಾಷೆ ಚಿತ್ರದಲ್ಲೂ ಕಾಣಿಸಿಕೊಂಡಿರುತ್ತಾರೆ.
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ಪೋಷಕ ನಟ:
ಕುಡ್ಲ ಕೆಫೆ, ರೆಡ್ ಎಫ್ಎಂ ತುಳು ಚಲನಚಿತ್ರ ಪ್ರಶಸ್ತಿಗಳು — 2014, ಕಾಮಿಕ್ ರೋಲ್ನಲ್ಲಿ ಅತ್ಯುತ್ತಮ ನಟ, ಒರಿಯರ್ದೋರಿ ಅಸಲ್ ತುಳು ಸಿನಿಮೋತ್ಸವ 2015 ಕಾಮಿಕ್ ಪಾತ್ರದಲ್ಲಿ ಅತ್ಯುತ್ತಮ ನಟ, ತೆಲಿಕೆದ ಬೊಲ್ಲಿ ನಾಟಕದಲ್ಲಿ ಅತ್ಯುತ್ತಮ ನಟ, 2015ರ ಅತ್ಯುತ್ತಮ ನಟ ‘ಚಾಲಿ ಪೋಲಿಲು’, ಮಂಗಳೂರಿನ ಪ್ರತಿಷ್ಠಿತ ಸಂದೇಶ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಇನ್ನಿತರ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. ಜೀಟಿಕೆ ಎನ್ನುವ ತುಳು ಸಿನೆಮಾದಲ್ಲಿನ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ನವೀನ್ ಪಡೀಲ್ ತುಳು ಭಾಷೆಗೆ ಮತ್ತು ತುಳು ಚಿತ್ರರಂಗಕ್ಕೆ ಹೆಮ್ಮೆ ತಂದಿರುತ್ತಾರೆ.
ಪಡೀಲ್ ಅವರು ಇಂಗ್ಲಂಡ್, ಆಸ್ಟ್ರೇಲಿಯಾ, ನೈಜೀರಿಯ, ಕೀನ್ಯ, ದುಬೈ, ಮಸ್ಕತ್, ಕತಾರ್, ಬೆಹೆರೈನ್, ಸೌದಿ ಅರೇಬಿಯಾ, ಸುಮಾರು 35 ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ ತಮ್ಮ ನಾಟಕಗಳ ಮತ್ತು ಪ್ರತಿಭೆಯ ಪ್ರದರ್ಶನ ನೀಡಿ ವಿಶ್ವಪ್ರಸಿದ್ಧಿಯನ್ನು ಪಡೆದಿರುತ್ತಾರೆ.