-ಶ್ರೀಕಾಂತ ಹೆಮ್ಮಾಡಿ, ಕುಂದಾಪುರ
ಇಲ್ಲಿ ನಿತ್ಯವೂ ಕುಗ್ರಾಮಗಳಿಂದ ಅರ್ಜಿ ಹಿಡಿದು ನೂರಾರು ಮಂದಿ ಬರುತ್ತಾರೆ. ಗರ್ಭಿಣಿಯರು, ಅಂಗವಿಕಲರು, ವಯೋವೃದ್ದರು ಸೇರಿದಂತೆ ಸ್ವಂತ ಸೂರಿನ ಕನಸು ಹೊತ್ತುಕೊಂಡವರು ದಾಖಲೆಗಳ ಫೈಲು ಹಿಡಿದುಕೊಂಡು ಈ ಕಚೇರಿಯಲ್ಲಿ ಸರತಿ ಸಾಲಿನಲ್ಲಿ ಬಂದು ನಿಲ್ಲುತ್ತಾರೆ. ವಿಪರ್ಯಾಸವೆಂದರೆ ಸ್ವಂತ ಸೂರನ್ನು ಕಲ್ಪಿಸಿಕೊಡುವ ಕಚೇರಿಯಲ್ಲೇ ಅಭದ್ರತೆಯಿಂದಾಗಿ ಇಲ್ಲಿನ ಸಿಬ್ಬಂದಿಗಳು ಜೀವ ಕೈಯ್ಯಲ್ಲಿ ಹಿಡಿದೇ ದಿನ ದೂಡುತ್ತಿದ್ದಾರೆಂದರೆ ಆಶ್ಚರ್ಯವಾದೀತು!
ಇದು ಯಾವುದೋ ಒಂದು ಗ್ರಾಮದ ಸರ್ಕಾರಿ ಕಟ್ಟಡದ ಅಲ್ಲ. ಕಳಪೆ ಕಾಮಗಾರಿಯಿಂದಾಗಿ ಆಗಾಗೆ ಸುದ್ದಿಯಲ್ಲಿರುವ ಕುಂದಾಪುರದ ಮಿನಿ ವಿಧಾನಸೌಧದ ದುಸ್ಥಿತಿ ಇದು. ಕಟ್ಟಡ ಕಾಮಗಾರಿ ಉದ್ಘಾಟನೆಗೂ ಮುನ್ನ ಕಳಪೆ ಕಾಮಗಾರಿಯಿಂದಾಗಿ ಮಾಧ್ಯಮಗಳ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಮಿನಿ ವಿಧಾನಸೌಧ ಕಟ್ಟಡ ಕೇವಲ ನಾಲ್ಕು ವರ್ಷಗಳು ಸಮೀಪಿಸುತ್ತಿದ್ದಂತೆಯೇ ಒಂದೊಂದಾಗಿಯೇ ಕಳಚಿಕೊಳ್ಳುತ್ತಲೇ ಇವೆ.
ಕಚೇರಿಯಲ್ಲೂ ಕೊಡೆ ಹಿಡಿಯಬೇಕು!
ಉದ್ಘಾಟನೆಗೊಂಡು ನಾಲ್ಕೇ ವರ್ಷದಲ್ಲಿ ಮೂರ್ನಾಲ್ಕು ಭಾರಿ ಕಟ್ಟಡದ ಛಾವಣಿಯ ಗಾರೆ ಕುಸಿದಿದೆ. ಮೂರ್ನಾಲ್ಕು ಬಾರಿ ಇಂತಹ ಅವಘಡಗಳು ಸಂಭವಿಸಿದರೂ ಸಾರ್ವಜನಿಕರು ಹಾಗೂ ಸಿಬ್ಬಂದಿಗಳು ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಕಳಪೆ ಕಾಮಗಾರಿಯ ಪರಿಣಾಮ ಮಳೆಗಾಲದಲ್ಲಿ ನೀರು ಸೋರುತ್ತಿದ್ದು, ಕಚೇರಿಗೆ ಬಂದವರು ಕೊಡೆ ಹಿಡಿದೆ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ಒಂದೆಡೆಯಾದರೆ ಬಿರುಕುಬಿಟ್ಟ ಗಾರೆಗಳು ಯಾವ ಕ್ಷಣದಲ್ಲಾದರೂ ಕೆಳಗೆ ಬೀಳುವ ಸಾಧ್ಯತೆಗಳಿವೆ.
ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಇಷ್ಟೆಲ್ಲಾ ಅಪಾಯಗಳನ್ನು ಎದುರಿಸುತ್ತಿದ್ದರು ಸಂಬಧಪಟ್ಟವರು ಮಾತ್ರ ತುಟಿ ಬಿಚ್ಚದಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಛಾವಣಿ ಕುಸಿದು ಗಾಯ:ತಪ್ಪಿತು ದುರಂತ
ಶನಿವಾರ ಮತ್ತೆ ಮಿನಿ ವಿಧಾನಸೌಧದ ಸ್ಲ್ಯಾಬ್ ಗಾರೆ ಕುಸಿದಿದ್ದು, ಕಚೇರಿಯೊಳಗಿದ್ದ ಓರ್ವ ಗಾಯಗೊಂಡು ಉಳಿದವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ವಾರಾಹಿ ಪಾಜೆಕ್ಟ್ನ ನಿವೃತ್ತ ಉದ್ಯೋಗಿ ನಾರಾಯಣ ಬಿಲ್ಲವ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಮಿನಿ ವಿಧಾನಸೌಧದ ಮೇಲಂತಸ್ತಿನಲ್ಲಿರುವ ಕುಂದಾಪುರ ಉಪವಿಭಾಗಾಧಿಕಾರಿ ಸಿಬ್ಬಂದಿಗಳ ಕಚೇರಿಯಲ್ಲಿ ಛಾವಣಿ ಕುಸಿದು ಬಿದ್ದಿದ್ದು, ನಾರಾಯಣ ಬಿಲ್ಲವರ ತಲೆ ಹಾಗೂ ಕೈಕಾಲುಗಳಿಗೆ ಗಾಯಗಳಾಗಿವೆ. ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಬಾಲಕೃಷ್ಣ ಎಂಬುವರೂ ಅಲ್ಲಿಯೇ ಇದ್ದರೂ ಅವರು ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾರೆ.
ಸ್ಲ್ಯಾಬ್ ಗಾರೆ ಕುಸಿತದ ಪರಿಣಾಮ ಕಚೇರಿಯೊಳಗಿದ್ದ ಕಂಪ್ಯೂಟರ್, ಫೋನ್, ಫ್ಯಾನ್ ಹಾಗೂ ಕಡತಗಳು ಹಾಗೂ ಪೀಠೋಪಕರಣಗಳು ಹಾನಿಯಾಗಿವೆ. ಇನ್ನು ಹಲವೆಡೆ ಸ್ಲ್ಯಾಬ್ ಗಾರೆಗಳು ಬಿರುಕು ಬಿಟ್ಟಿದ್ದು ಇನ್ನಷ್ಟು ಅನಾಹುತಗಳು ಸಂಭವಿಸುವ ಸಾಧ್ಯತೆಗಳಿವೆ.
ಆಕ್ಷೇಪಗಳ ನಡುವೆಯೂ ಉದ್ಘಾಟನೆ:
೨೦೧೫ ಫೆ.೭ ರಂದು ಉದ್ಘಾಟನೆಗೊಂಡಿದ್ದ ಕುಂದಾಪುರದ ಮಿನಿ ವಿಧಾನಸೌಧದ ಕಾಮಗಾರಿಯ ಕುರಿತಂತೆ ಹಲವು ಬಾರಿ ಸಾರ್ವಜನಿಕ ಆಕ್ಷೇಪಗಳು ಕೇಳಿ ಬಂದಿದ್ದವು.
ಆದರೂ ವಿಧಾನ ಸೌಧ ಕಾಮಗಾರಿ ಗುಣಮಟ್ಟದ ಬಗ್ಗೆ ತನಿಖೆ ನಡೆಸದೆ ಅಂದಿನ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಹಾಗೂ ಅಂದಿನ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿನಯ ಕುಮಾರ್ ಸೊರಕೆ ಮೂಲಕ ಕಟ್ಟಡವನ್ನು ಉದ್ಘಾಟನೆ ಮಾಡಿದ್ದರು.
ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಟ್ವೆಂಟಿ ಟ್ವೆಂಟಿ ಸರ್ಕಾರ ಇದ್ದಾಗ ಅಂದಿನ ಸಚಿವ ಡಾ.ವಿ.ಎಸ್. ಆಚಾರ್ಯ ಹಾಗೂ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪ್ರಯತ್ನದ ಫಲವಾಗಿ ೫ ಕೋಟಿ ವೆಚ್ಚದಲ್ಲಿ ಮಿನಿ ವಿಧಾನ ಸೌಧಕ್ಕೆ ಮುಹೂರ್ತ ಕೂಡಿ ಬಂದಿತ್ತು. ಶಂಕು ಸ್ಥಾಪನೆಯಿಂದ ಹಿಡಿದು ಉದ್ಘಾಟನೆ ತನಕ ಮಿನಿ ವಿಧಾನ ಸೌಧ ಕಳಪೆ ಕಾಮಗಾರಿಯಿಂದ ಸುದ್ದಿಯಾದರೂ ಯಾರೊಬ್ಬರೂ ಕಾಮಗಾರಿ ಗುಣಮಟ್ಟದ ಬಗ್ಗೆ ಧ್ವನಿ ಎತ್ತಿಲ್ಲ.
ಮಳೆಗಾಲದಲ್ಲಿ ಕೊಡೆ ಹಿಡಿದು ಕೂರುವ ಸ್ಥಿತಿ:
ಯಾವತ್ತು ಸ್ಲಾಬ್ ಕಾಂಕ್ರಿಟ್ ಕಳಚಿಕೊಳ್ಳುತ್ತದೋ ಎನ್ನುವ ಭಯ ಒಂದೆಡೆಯಾದರೆ ಜೋರು ಮಳೆ ಬಂದರೆ ಕಚೇರಿಯೊಳಕ್ಕೆ ಕೊಡೆ ಹಿಡಿಯಬೇಕಾದ ದೌರ್ಭಾಗ್ಯದಲ್ಲಿ ಸಿಬ್ಬಂದಿ ಹಾಗೂ ಕಚೇರಿಗೆ ಬರುವ ಜನರದ್ದು. ಆಧಾರ್ ಕಾರ್ಡ್ ಲಿಂಕ್, ಪಡಿತರ ಚೀಟಿ ಇನ್ನಿತರ ಸರ್ಕಾರಿ ಸೌಲಭ್ಯಗಳಿಗಾಗಿ ಕುಗ್ರಾಮಗಳಿಂದ ಬರುವ ಬರುವ ಜನರು ಜೀವಭಯದಲ್ಲಿಯೇ ಬಂದು ಕೆಲಸ ಮುಗಿಸಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದ್ದು,
ಸಂಬಂದಪಟ್ಟವರು ಸೂಕ್ತ ತಾಂತ್ರಿಕ ಕಾರಣ ತಿಳಿದು ಸಮಸ್ಯೆ ಬಗೆಹರಿಸಬೇಕು. ಗುತ್ತಿಗೆದಾರ ಮತ್ತು ಇಂಜಿನಿಯರ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಯಾರು ಏನಂತಾರೆ?
ಕಟ್ಟಡ ನಿರ್ಮಿಸಿದ ಒಂದೇ ವರ್ಷದಲ್ಲಿ ಮಿನಿ ವಿಧಾನಸೌಧ ಹನಿ ವಿಧಾನ ಸೌಧವಾಗಿ ಮಾರ್ಪಟ್ಟಿದೆ. ಸೋರುವ ಕಟ್ಟಡದೊಳಗೆ ಕೆಲಸ ಮಾಡುವ ಅನಿವಾರ್ಯತೆ ಇಲ್ಲಿನ ಸಿಬ್ಬಂದಿಗಳದ್ದು. ಜನಪ್ರತಿನಿಧಿಗಳು, ಅಧಿಕಾರಿಗಳು, ಗುತ್ತಿಗೆದಾರರು ಈ ಕಳೆಪೆ ಕಾಮಗಾರಿಯ ಹೊಣೆಯನ್ನು ಹೊರಬೇಕು. ಪ್ರಧಾನ ಕಚೇರಿಗಳಿರುವುದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಿನಿವಿಧಾನಸೌಧಕ್ಕೆ ಬರುತ್ತಾರೆ. ಸಾಕಷ್ಟು ಸಿಬ್ಬಂದಿಗಳು ಕೂಡ ಕೆಲಸ ನಿರ್ವಹಿಸುತ್ತಿದ್ದಾರೆ. ಇವರೆಲ್ಲರ ಪ್ರಾಣ ರಕ್ಷಣೆಗೆ ಏನು ವ್ಯವಸ್ಥೆ ಇದೆ ಎನ್ನುವುದು ನಾವೆಲ್ಲರೂ ಕೇಳುತ್ತಿರುವ ಪ್ರಶ್ನೆ. ಕಳಪೆ ಕಾಮಗಾರಿ ನಡೆಸಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಬೇಕು.
–ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ವಕೀಲರು ಕುಂದಾಪುರ
ಸಹಾಯಕ ಕಮಿಶನರ್ ಕಚೇರಿಯ ಸಿಬ್ಬಂದಿಗಳು ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಏಕಾಏಕಿಯಾಗಿ ಸಿಮೆಂಟೆ ಗಾರೆಗಳು ತಲೆ ಮೇಲೆ ಬಿದ್ದು ಒಬ್ಬರಿಗೆ ಗಾಯಗಳಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಚೇರಿಯಲ್ಲಿನ ಪೀಠೋಪಕರಣಗಳಿಗೆ ಹಾನಿಯಾಗಿವೆ. ಕಚೇರಿಯ ಸಿಬ್ಬಂದಿಗಳು ಅಭದ್ರತೆಯ ಕಟ್ಟಡದಲ್ಲಿ ನಮಗೆ ಕೆಲಸ ಮಾಡಲು ಸಾಧ್ಯವಿಲ್ಲ. ನಮಗೆ ಬೇರೆ ಕಟ್ಟದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
–ತಿಪ್ಪೇಸ್ವಾಮಿ, ತಹಸೀಲ್ದಾರರು ಕುಂದಾಪುರ