ಮುಂಬೈ ಉದ್ಯಮಿಯಿಂದ ಪ್ಲಾಶ್ಟಿಕ್ ಬಳಕೆ ಅಪಾಯದ ಕುರಿತು ಜಾಗೃತಿ: ಪರ್ಯಾಯ ಬಟ್ಟೆ ಚೀಲ‌ ತಯಾರಿಕಾ ಸಂಸ್ಥೆ ಸ್ಥಾಪನೆ

ಉಡುಪಿ: ಪ್ಲಾಸ್ಟಿಕ್‌ ಬಳಕೆಯ ಅಪಾಯದ ಕುರಿತು ಸರ್ಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಇದಕ್ಕೆ ಪೂರಕ ಎಂಬಂತೆ ಕುಂದಾಪುರದ ಮೂಲದ ಉದ್ಯಮಿಯೊಬ್ಬರು ಫ್ರೆಂಡ್ಸ್‌ ಸ್ವಾವಲಂಬನಾ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಪ್ಲಾಸ್ಟಿಕ್‌ ಬಳಕೆಯಿಂದ ಆಗುತ್ತಿರುವ ಹಾನಿ ಹಾಗೂ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಟ್ಟೆಯ ಚೀಲಗಳನ್ನು ಉಪಯೋಗಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಪ್ಲಾಸ್ಟಿಕ್‌ ಬಳಕೆಯ ಅಪಾಯವನ್ನು ಮನಗಂಡ ಕುಂದಾಪುರ ಮೂಲದ ವೆಂಕಟೇಶ್‌ ಪೈ ಅವರು, 2013ರಲ್ಲಿ ಮುಂಬೈ ಸಮೀಪದ ಡೊಂಬಿವಲಿಯಲ್ಲಿ ಬಟ್ಟೆ ಚೀಲ ತಯಾರಿಸುವ ಫ್ರೆಂಡ್ಸ್‌ ಸ್ವಾವಲಂಬನಾ ಕೇಂದ್ರವನ್ನು ಹುಟ್ಟುಹಾಕಿದರು.
ಈ ಬಗ್ಗೆ ಶನಿವಾರ ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ‌ ಮಾಹಿತಿ ನೀಡಿದ ಅವರು, ಸಂಸ್ಥೆಯ ಮೂಲಕ ಮಹಿಳೆಯರಿಗೆ ಉದ್ಯೋಗವನ್ನು ಕಲ್ಪಿಸಿ, ಅವರ ಕುಟುಂಬಗಳಿಗೂ ಆರ್ಥಿಕವಾಗಿ ನೆರವಾಗಿದ್ದು, ಇವರಿಗೆ ಬಟ್ಟೆಯ ಚೀಲಗಳನ್ನು ತಯಾರಿಸಿ ಮಾರಾಟ ಮಾಡುವುದರ ಜತೆಗೆ ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದ್ದೇವೆ ಎಂದರು.
‘ಪ್ಲಾಸ್ಟಿಕ್‌ ತ್ಯಜಿಸಿ, ಬಟ್ಟೆ ಚೀಲಗಳನ್ನು ಬಳಸಿ, ಪರಿಸರ ರಕ್ಷಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಈ ಬಟ್ಟೆ ಚೀಲಗಳನ್ನು ಮಾರ್ಕೆಟಿಂಗ್‌ ಮಾಡಲಾಗುತ್ತಿದೆ.
ಸಂಸ್ಥೆಯು ಮುಂಬೈನ ಡೊಂಬಿವಲಿ, ಚಾಲೀಸ್ಗಾಂವ್‌, ಕುಂದಾಪುರ ಹಾಗೂ ಇತರ ಕಡೆಗಳಲ್ಲಿ ಶಾಖೆಗಳನ್ನು ಹೊಂದಿದೆ. ಸಂಸ್ಥೆಯಲ್ಲಿ ಒಟ್ಟು 300ಕ್ಕೂ ಹೆಚ್ಚಿನ ಮಹಿಳೆಯರು ಹಾಗೂ‌ ಪುರುಷರು ಬಟ್ಟೆಯ ಚೀಲವನ್ನು ಹೊಲಿಯುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ನೌಕರರಿಗೆ ಚೀಲದ ವಿನ್ಯಾಸದ ಆಧಾರದಲ್ಲಿ ವೇತನವನ್ನು ನೀಡಲಾಗುತ್ತಿದೆ. ವಿನ್ಯಾಸ ಹಾಗೂ ಗಾತ್ರದ
ಆಧಾರದಲ್ಲಿ ಚೀಲಗಳಿಗೆ ದರ ನಿಗದಿ ಮಾಡಲಾಗಿದೆ ಎಂದು ವೆಂಕಟೇಶ್‌ ಪೈ ತಿಳಿಸಿದರು.
12ರಿಂದ 40 ರೂ.ವರೆಗಿನ ವಿವಿಧ ಗಾತ್ರ ಹಾಗೂ ವಿನ್ಯಾಸದ ಚೀಲಗಳು ಸಂಸ್ಥೆಯಲ್ಲಿ ಲಭ್ಯವಿದೆ. ಆದರೆ ಸರಿಯಾದ ಪ್ರಚಾರ ಹಾಗೂ ಮಾರುಕಟ್ಟೆಯ ಕೊರತೆಯಿಂದ ಇದು ಎಲ್ಲ ಜನರನ್ನು ತಲುಪಿಲ್ಲ.  ಆರ್ಥಿಕವಾಗಿ ಸಂಕಷ್ಟದಲ್ಲಿರುವ 30ಕ್ಕೂ ಹೆಚ್ಚಿನ ಮಹಿಳೆಯರಿಗೆ‌ ಹಾಗೂ ಮೂರ್ನಾಲ್ಕು ಸಂಘ ಸಂಸ್ಥೆಗಳಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡಲಾಗಿದೆ ಎಂದರು.
ಎಲ್ಲ ಜೀವಿಗಳಿಗೂ ಪ್ಲಾಸ್ಟಿಕ್‌ ಮಾರಕ ಪ್ಲಾಸ್ಟಿಕ್‌ ಎಂಬ ಮಹಾಮಾರಿ ಇಡೀ ಪರಿಸರವನ್ನು ಹಾಳು ಮಾಡುತ್ತಿದೆ. ಮನುಷ್ಯ
ಸೇರಿದಂತೆ ಎಲ್ಲ ಜೀವಿಗಳಿಗೂ ಇದು ಮಾರಕವಾಗಿದೆ. ಅದರ ಬಳಕೆ ಇಂದು ಅನಿವಾರ್ಯವಾದರೂ ಬಟ್ಟೆ ಚೀಲಗಳ ಬಳಕೆಯಿಂದ ಅದನ್ನು ಕಡಿಮೆ ಮಾಡಲು ಸಾಧ್ಯವಿದೆ. ಆದರೆ ಈ ನಿಟ್ಟಿನಲ್ಲಿ ಜನರು ಚಿಂತನೆ ಮಾಡಬೇಕು. ಪ್ರತಿಯೊಂದು ಮನೆಯಲ್ಲಿಯೂ ಬಟ್ಟೆ ಚೀಲಗಳನ್ನು ಬಳಕೆ ಮಾಡುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದರು.
ಗೋಷ್ಠಿಯಲ್ಲಿ ತುಳಾಸಿದಾಸ್ ಶೆಣೈ ಉಪಸ್ಥಿತರಿದ್ದರು.