ಉಡುಪಿ: ಪ್ರವಾಹ ಪೀಡಿತರಿಗೆ ಜಿಲ್ಲಾಡಳಿತದಿಂದ ನೆರವು

ಉಡುಪಿ:  ಎಲ್ಲಿ ನೋಡಿದರಲ್ಲಿ ನಾನಾ ಬಗೆಯ  ವಸ್ತುಗಳ ರಾಶಿ, ಪ್ರತಿ ವಸ್ತುಗಳನ್ನೂ ವಿಂಗಡಿಸಿ ಜೋಪಾನವಾಗಿ ಒಂದೆಡೆ ಸಂಗ್ರಹಿಸುತ್ತಿರುವ ಮಹಿಳಾ ಸಿಬ್ಬಂದಿಗಳು, ಸಂಗ್ರಹಿಸಿದ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ಭದ್ರವಾಗಿ ಪ್ಯಾಕ್ ಮಾಡಿ, ಲಾರಿಗೆ ಲೋಡ್ ಮಾಡುತ್ತಿರುವ ಪುರುಷ ಸಿಬ್ಬಂದಿಗಳು, ಇಲ್ಲಿ ಅಧಿಕಾರಿ, ನೌಕರ ಎಂಬ ಭೇದ ವಿಲ್ಲದೇ ಎಲ್ಲರಿಗೂ ಸಮಾನವಾಗಿ ಬಿಡುವಿಲ್ಲದ ಕೆಲಸ. ಈ ದೃಶ್ಯ ಕಂಡು ಬಂದದ್ದು, ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ.

    ರಾಜ್ಯದ ಅನೇಕ ಜಿಲ್ಲೆಗಳ ಪ್ರವಾಹ ಪೀಡಿತ ನಿರಾಶ್ರಿತರ ನೆರವಿಗಾಗಿ, ಜಿಲ್ಲಾಡಳಿತ ಸ್ಥಾಪಿಸಿರುವ ನೆರವು ಸ್ವೀಕೃತ ಕೇಂದ್ರದಲ್ಲಿ, ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ನೀಡಿದ ವಿವಿಧ ಸಾಮಗ್ರಿಗಳನ್ನು ಸಂತ್ರಸ್ಥರಿಗೆ ತಲುಪಿಸುವ ಕಾರ್ಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿನ ವಿವಿಧ ಇಲಾಖೆಯ ಸಿಬ್ಬಂದಿಗಳು ಅವಿರತವಾಗಿ ಶ್ರಮಿಸುತ್ತಿದ್ದಾರೆ.

 ನಿರಾಶ್ರಿತರಿಗಾಗಿ ಸಂಘ ಸಂಸ್ಥೆಗಳು ಮತ್ತು ನಾಗರೀಕರು ವಿವಿಧ ಸಾಮಗ್ರಿಗಳನ್ನು ನೀಡುತ್ತಿದ್ದು, ಈ ಸಾಮಗ್ರಿಗಳನ್ನು ಸ್ವೀಕರಿಸಿ, ಅವುಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ, ವಸ್ತುಗಳು ಹಾಳಾಗದಂತೆ ಒಂದೇ ಬಗೆಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ  ಪ್ಯಾಂಕಿಂಗ್ ಮಾಡಿ, ಲಾರಿಯಲ್ಲಿ ಜೋಡಿಸಲಾಗುತ್ತಿದೆ, ಈಗಾಗಲೇ ಮಡಿಕೇರಿ, ಬಾಗಲಕೋಟೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ನಿರಾಶ್ರಿತರಿಗಾಗಿ ಸುಮಾರು 1500 ಕ್ಕೂ ಹೆಚ್ಚು ಟನ್ ಸಾಮಗ್ರಿಗಳನ್ನು 3 ಲೋಡ್ ಗಳಲ್ಲಿ ಕಳುಹಿಸಿಕೊಡಲಾಗಿದೆ.

  ನೆರವು ಸ್ವೀಕೃತ ಕೇಂದ್ರದಲ್ಲಿ, ಎಲ್ಲಾ ಸಂಘ ಸಂಸ್ಥೆ ಮತ್ತು ನಾಗರೀಕರಿಂದ ಸ್ವೀಕರಿಸಿರುವ ಪ್ರತಿಯೊಂದು ಸಾಮಗ್ರಿಗಳನ್ನು ಪಟ್ಟಿ ಮಾಡಲಾಗಿದ್ದು, ಲಾರಿಗೆ ಲೋಡ್ ಮಾಡಿರುವ ಸಾಮಗ್ರಿಗಳ ಪಟ್ಟಿಯನ್ನೂ ಸಹ ಸಂಬಂದಪಟ್ಟ ಜಿಲ್ಲಾಡಳಿತಗಳಿಗೆ ಕಳುಹಿಸಲಾಗುತ್ತಿದೆ.

    ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ನಿರ್ದೇಶನದಲ್ಲಿ, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅವರ ಉಸ್ತುವಾರಿಯಲ್ಲಿ ನಿರಾಶ್ರಿತರಿಗೆ ಪರಿಹಾರ ಸಾಮಗ್ರಿಗಳನ್ನು ತಲುಪಿಸುವ ಕಾರ್ಯ ನಡೆಯುತ್ತಿದೆ.