ವಿಶೇಷ ಉಪನ್ಯಾಸ ಮಾಲೆ ಕಾರ್ಯಾಗಾರ:ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶ

ಉಡುಪಿ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು 2007 ರಿಂದ ವಿವಿಧ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ವಿಜ್ಞಾನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದೆ. ಪ್ರಸಕ್ತ ವರ್ಷ ಅಗಸ್ಟ್ 27 ರಿಂದ 29 ರವರೆಗೆ 3 ದಿನಗಳ ವಿಶೇಷ ಉಪನ್ಯಾಸ ಮಾಲೆ ಕಾರ್ಯಾಗಾರವನ್ನು ಇಸ್ರೋ ಸಂಸ್ಥೆಯ ಪ್ರಾದೇಶಿಕ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಲಾಗುತ್ತದೆ.

ಈ ಕಾರ್ಯಾಗಾರದಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳ ವಿಜ್ಞಾನ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು,ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಶೇಷ ಉಪನ್ಯಾಸಗಳನ್ನು ನುರಿತ ತಜ್ಞರಿಂದ ಏರ್ಪಡಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳುತಂತ್ರಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಆಧುನಿಕ ಸಂಶೋಧನೆಗಳ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ.

ಕಾರ್ಯಾಗಾರದಲ್ಲಿ ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಯುವ ಉಪನ್ಯಾಸಕರು ಭಾಗವಹಿಸಲು ಅಗಸ್ಟ್ 20 ರ ರೊಳಗೆ ನೊಂದಾಯಿಸಿಕೊಳ್ಳಬೇಕು.

ಅಕಾಡೆಮಿಯು ಆಯೋಜಿಸಲಾಗುತ್ತಿರುವ ಈ ಉದ್ದೇಶಿತ ಕಾರ್ಯಾಗಾರದ ಸದುಪಯೋಗವನ್ನು ಸ್ನಾತಕೋತ್ತರ ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಎಮ್.ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.