ಚಿಕ್ಕಮಗಳೂರು: ದತ್ತ ಜಯಂತ್ಯುತ್ಸವ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಶೋಭಾಯಾತ್ರೆಯು ಅದ್ಧೂರಿಯಾಗಿ ನಡೆಯಿತು. ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ರತ್ನಗಿರಿ ರಸ್ತೆಯದಿಂದ ಮಧ್ಯಾಹ್ನ 3.15ಕ್ಕೆ ಶೋಭಾಯಾತ್ರೆ ಹೊರಟಿತು. ಅಲಂಕೃತ ವಾಹನದಲ್ಲಿ ಪ್ರತಿಷ್ಠಾಪಿಸಿದ್ದ ದತ್ತಾತ್ರೇಯರ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. ದತ್ತಭಕ್ತರು ದತ್ತಾತ್ರೇಯ ಸ್ವಾಮಿ ಅಡ್ಡೆಯನ್ನು ಹೊತ್ತು ಸಾಗಿದರು.
ಪಟಾಕಿ ಸಪ್ಪಳ, ಧ್ವನಿವರ್ಧಕದ ಅಬ್ಬರ, ಪಟಾಕಿ ಸಪ್ಪಳ, ವೀರಗಾಸೆ, ಗೊಂಬೆಕುಣಿತ, ಸಾಂಸ್ಕೃತಿಕ ಕಲಾತಂಡಗಳ ಮೆರುಗಿನಲ್ಲಿ ವೈಭವಯುತವಾಗಿ ಮೆರವಣಿಗೆ ಸಾಗಿತು. ಪೊಲೀಸ್ ಸರ್ಪಗಾವಲು ವ್ಯವಸ್ಥೆ ಮಾಡಲಾಗಿತ್ತು. ಶೋಭಾಯಾತ್ರೆ ನೋಡಲು ನಿಂತಿದ್ದ ಭಕ್ತರು ಉತ್ಸವಮೂರ್ತಿಗೆ ನಮಿಸಿ ಭಕ್ತಿ ಸಮರ್ಪಿಸಿದರು. ಮೆರವಣಿಗೆಯುದ್ದಕ್ಕೂ ಭಗವಾ ಧ್ವಜಗಳ ಹಾರಾಟ ಜೋರಾಗಿದ್ದು, ಮೆರವಣಿಗೆಯ ಸೊಬಗನ್ನು ಸೆಲ್ಫೋನ್ ಕ್ಯಾಮೆರಾಗಳಲ್ಲಿ ಕ್ಲಿಕ್ಕಿಸಿಕೊಂಡರು.