ಉಡುಪಿ: ಹಿರಿಯ ಪತ್ರಕರ್ತ, ದೂರದರ್ಶನ ಉಡುಪಿ ಜಿಲ್ಲಾ ವರದಿಗಾರ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಜಯಕರ ಸುವರ್ಣ ಸೋಮವಾರ ರಾತ್ರಿ ಹೃದಯಾಘಾತದಿಂದ ಕಲ್ಮಾಡಿಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯ ದರ್ಶಿಯಾಗಿ, 2014-17ನೇ ಸಾಲಿನಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಇವರು, ಪ್ರಸ್ತುತ ಸಂಘದ ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯ ದರ್ಶಿ ಹಾಗೂ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು.
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ. ಉಡುಪಿ ಜಿಲ್ಲಾ ಉಪಾಧ್ಯಕ್ಷ, ಕರ್ನಾಟಕ ಫೋಟೋಗ್ರಾಫರ್ಸ್ ಅಸೋಸಿಯೇಶನ್ನ ಉಡುಪಿ ಜಿಲ್ಲಾ ಪ್ರತಿನಿಧಿಯಾಗಿರುವ ಇವರು, ಎಸ್ಕೆಪಿಎ ಉಡುಪಿ ವಲಯದ ಮಾಜಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಉಡುಪಿ ಶ್ರೀಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಸ್ಥಾಪಕ ವಿಶ್ವಸ್ಥರಾಗಿ, ಮಲ್ಪೆ ನಾರಾಯಣ ಗುರು ಸೇವಾದಳ ಅಧ್ಯಕ್ಷರಾಗಿ, ಕಲ್ಮಾಡಿ ಶ್ರೀಬ್ರಹ್ಮಬೈದರ್ಕಳ ಗರಡಿ ಆಡಳಿತ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಇವರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮಂಗಳವಾರ ಕಲ್ಮಾಡಿಯಲ್ಲಿರುವ ಅವರ ಮನೆಯಲ್ಲಿ ನೂರಾರು ಮಂದಿ ಅಂತಿಮ ದರ್ಶನ ಪಡೆದಿದ್ದು, ಮಲ್ಪೆಯ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಸಂತಾಪ: ಜಯಕರ ಸುವರ್ಣ ಅವರ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮೀ ಹೆಬ್ಬಾಳಕರ್, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಸಂಘದ ರಜತ ಮಹೋತ್ಸವ ಸಮಿತಿಯ ಸಂಚಾಲಕ ಮುಹಮ್ಮದ್ ಶರೀಫ್ ಕಾರ್ಕಳ, ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಆರಾಡಿ, ಎಸ್ಕೆಪಿಎ ದ.ಕ. ಮತ್ತು ಉಡುಪಿ ಜಿಲ್ಲಾ ಅಧ್ಯಕ್ಷ ಪದ್ಮಪ್ರಸಾದ್ ಜೈನ್, ಉಡುಪಿ ವಲಯ ಅಧ್ಯಕ್ಷ ಸುಧೀರ್ ಎಂ.ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸಂತಾಪ ವ್ಯಕ್ತಪಡಿಸಿದ್ದಾರೆ.