ನೀಟ್ 2022: ಎಕ್ಸ್ ಪರ್ಟ್ ಕಾಲೇಜಿನ ಶೇ.93ರಷ್ಟು ವಿದ್ಯಾರ್ಥಿಗಳಿಗೆ ವೈದ್ಯಕೀಯ ಪ್ರವೇಶ

ಮಂಗಳೂರು: ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ನಡೆದ ಅಖಿಲ ಭಾರತ ಮಟ್ಟದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಆದಿತ್ಯ ಕಾಮತ್ ಅಮ್ಮೇಂಬಳ ಅಖಿಲ ಭಾರತ ಮಟ್ಟದಲ್ಲಿ 28ನೇ ರ‍್ಯಾಂಕ್ ಪಡೆಯುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಒಟ್ಟು ಕಾಲೇಜಿನ 1168 ವಿದ್ಯಾರ್ಥಿಗಳಲ್ಲಿ 1094ರಷ್ಟು ಅಂದರೆ ಶೇ. 93.66ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.

ಕಾಲೇಜಿನ 720ರಲ್ಲಿ 705 ಅಂಕ ಪಡೆದ ಆದಿತ್ಯ ಕಾಮತ್ ಅಮ್ಮೇಂಬಳ ಸಾಮಾನ್ಯ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ 28ನೇ ರ‍್ಯಾಂಕ್ ಪಡೆದಿದ್ದಾರೆ. 695 ಅಂಕ ಪಡೆದ ಸ್ಕಂದ ಶಾನ್‌ಭಾಗ್ 175ನೇ ರ‍್ಯಾಂಕ್, 685 ಅಂಕ ಪಡೆದ ಪ್ರಿಯಾ ಅಶೋಕ್ ಪಾಟೀಲ್ 478ನೇ ರ‍್ಯಾಂಕ್, 680 ಅಂಕ ಪಡೆದ ಕಾರ್ತಿಕ್ ರಾಮ್ ಬಿ.ಎನ್. 878ನೇ ರ‍್ಯಾಂಕ್, 677 ಅಂಕ ಪಡೆದ ವಿವೇಕ್‌ರಾಜ್ ಎಂ. ದಂಡು 977 ರ‍್ಯಾಂಕ್ ಪಡೆದುಕೊಂಡಿದ್ದಾರೆ. ಕ್ಯಾಟಗರಿ ವಿಭಾಗದಲ್ಲಿ ಶ್ರೇಯಸ್ ಕೆ. ನಿಶಾನಿ ಅವರು 45ನೇ ರ‍್ಯಾಂಕ್, ವಿಶಾಲ್ ಎಸ್. 267ನೇ ರ‍್ಯಾಂಕ್ ಪಡೆದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಲ್ ಮೆರಿಟ್‌ನಲ್ಲಿ ಅಖಿಲ ಭಾರತ ಮಟ್ಟದ ಮೊದಲ ಒಂದು ಸಾವಿರ ರ‍್ಯಾಂಕ್‌ಗಳಲ್ಲಿ 5 ರ‍್ಯಾಂಕ್ ಕಾಲೇಜಿನ ವಿದ್ಯಾರ್ಥಿಗಳಿಗೆ ದೊರೆತಿದೆ. ಎಂಟು ವಿದ್ಯಾರ್ಥಿಗಳು 675 ಕ್ಕಿಂತ ಅಧಿಕ ಅಂಕ ಪಡೆದರೆ, 20 ವಿದ್ಯಾರ್ಥಿಗಳು 650 ಕ್ಕಿಂತ ಅಧಿಕ ಅಂಕ 43 ವಿದ್ಯಾರ್ಥಿಗಳು 625ಕ್ಕಿಂತ ಅಧಿಕ, 73 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ, 146 ವಿದ್ಯಾರ್ಥಿಗಳು 550ಕ್ಕಿಂತ ಅಧಿಕ, 225 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ ಎಂದು ತಿಳಿಸಿದರು.

ಅಖಿಲ ಭಾರತ ಮಟ್ಟದಲ್ಲಿ ನೀಟ್ ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ. 56ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಅರ್ಹತೆ ಪಡೆದರೆ, ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಶೇ. 93ರಷ್ಟು ವಿದ್ಯಾರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ. ಇದು ಶಿಕ್ಷಣ ಸಂಸ್ಥೆಯ ಗುಣಮಟ್ಟಕ್ಕೆ ಕೈಗನ್ನಡಿಯಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.