ಗಾಜಾದಲ್ಲಿ ಹಸಿವಿನಿಂದ ಬಳಲುತ್ತಿರುವ ಶೇಕಡ 90ರಷ್ಟು ಜನ : 7 ಸಾವಿರ ಹಮಾಸ್ ಉಗ್ರರ ಹತ್ಯೆ

ಖಾನ್​ ಯೂನಿಸ್ ​(ಗಾಜಾ): ದಕ್ಷಿಣ ಗಾಜಾದ ಖಾನ್ ಯೂನಿಸ್ ನಗರದಿಂದ ಈಜಿಪ್ಟ್ ಗಡಿ ನಗರವಾದ ರಫಾಗೆ ಹೋಗುವ ರಸ್ತೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲಿ ಬಾಂಬ್ ದಾಳಿ ನಡೆಸಿದೆ ಎಂದು ಹಮಾಸ್ ಉಗ್ರಗಾಮಿ ಗುಂಪು ಹೇಳಿದೆ.
ಕದನ ವಿರಾಮಕ್ಕೆ ಕರೆ ನೀಡುವ ವಿಶ್ವಸಂಸ್ಥೆ ನಿರ್ಣಯವನ್ನು ಅಮೆರಿಕ ನಿರ್ಬಂಧಿಸಿದ ನಂತರ ಇಸ್ರೇಲಿ ಪಡೆಗಳು ಗಾಜಾದ ಮೇಲೆ ದಾಳಿಯನ್ನು ತೀವ್ರಗೊಳಿಸಿದವು. ಹಮಾಸ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯೊಂದಿಗೆ ಇಸ್ರೇಲ್ ದಕ್ಷಿಣ ಗಾಜಾದ ಮೇಲೆ ತನ್ನ ದಾಳಿಯನ್ನು ಹೆಚ್ಚಿಸಿದೆ.

ಹಮಾಸ್ ನಿರ್ಮೂಲನೆಯೇ ನಮ್ಮ ಗುರಿ: ಗಾಜಾದ 2.3 ಮಿಲಿಯನ್ ಜನಸಂಖ್ಯೆಯಲ್ಲಿ ಶೇ.85ರಷ್ಟು ಜನರು ನಿರಾಶ್ರಿತರಾಗಿರುವ ಕಾರಣ ಕದನ ವಿರಾಮ ಪಾಲಿಸುವಂತೆ ಅಂತಾರಾಷ್ಟ್ರೀಯ ಸಮುದಾಯ ಇಸ್ರೇಲ್ ಮೇಲೆ ಒತ್ತಡ ಹೆಚ್ಚಿಸುತ್ತಿದೆ. ಆದ್ರೆ ಇಸ್ರೇಲ್‌ಗೆ ಅಮೆರಿಕದಿಂದ ಸಂಪೂರ್ಣ ಬೆಂಬಲ ಸಿಗುತ್ತಿದೆ. ಉಗ್ರಗಾಮಿ ಸಂಘಟನೆ ಹಮಾಸ್ ಅನ್ನು ನಾಶಪಡಿಸುವ ತನ್ನ ಗುರಿಯನ್ನು ಸಾಧಿಸುವವರೆಗೆ ಇಸ್ರೇಲ್ ಪರವಾಗಿ ನಿಲ್ಲುವುದಾಗಿ ಅಮೆರಿಕ ಈಗಾಗಲೇ ಘೋಷಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹಮಾಸ್ ಜಾಲವನ್ನು ಕೊನೆಗೊಳಿಸುವುದು ತಮ್ಮ ಅಂತಿಮ ಗುರಿ ಎಂದು ಪುನರುಚ್ಚರಿಸಿದ್ದಾರೆ.

ಹೊತ್ತಿ ಉರಿಯುತ್ತಿರುವ ಖಾನ್​ ಯೂನಿಸ್​: ಖಾನ್ ಯೂನಿಸ್ ನಗರವು ಬಾಂಬ್‌ಗಳು ಮತ್ತು ಗುಂಡಿನ ಚಕಮಕಿಯಿಂದ ಹೊತ್ತಿ ಉರಿಯುತ್ತಿದೆ. ಈ ನಗರದ ಸಿಟಿ ಸೆಂಟರ್​ ಜಾಗದಿಂದ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಇಲ್ಲಿನ ನಾಗರಿಕರಿಗೆ ಇಸ್ರೇಲ್​ ಎಚ್ಚರಿಕೆ ನೀಡಿದೆ. ಇಸ್ರೇಲ್ ಸುರಕ್ಷಿತ ವಲಯ ಎಂದು ಘೋಷಿಸಿರುವ ಪ್ರದೇಶ ಲಂಡನ್ ವಿಮಾನ ನಿಲ್ದಾಣದ ಗಾತ್ರಕ್ಕಿಂತ ಕಡಿಮೆ ಇದೆ. ಆ ಸಣ್ಣ ಜಾಗದಲ್ಲಿ ಲಕ್ಷಾಂತರ ಪ್ಯಾಲೆಸ್ತೀನಿಯರು ಹೇಗೆ ವಾಸಿಸುತ್ತಾರೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಇಸ್ರೇಲ್​-ಹಮಾಸ್​ ಯುದ್ಧದಿಂದ 17,700 ಪ್ಯಾಲೆಸ್ತೀನಿಯರು ಸಾವು; ದಕ್ಷಿಣ ಗಾಜಾದಲ್ಲಿ ಇಸ್ರೇಲ್​ ದಾಳಿಯ ಉಲ್ಬಣದಿಂದಾಗಿ ಸಾವಿರಾರು ಜನರು ಆಶ್ರಯವನ್ನು ಹುಡುಕಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಾಜಾದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ. ಇಸ್ರೇಲ್ ದಾಳಿಯಲ್ಲಿ ಇದುವರೆಗೆ 17,700 ಪ್ಯಾಲೆಸ್ತೀನಿಯಾದವರು ಸಾವನ್ನಪ್ಪಿದ್ದಾರೆ. ಶೇಕಡ 40 ರಷ್ಟು 18 ವರ್ಷದೊಳಗಿನ ಮಕ್ಕಳು ಮೃತಪಟ್ಟಿದ್ದಾರೆ ಎಂದು ಹಮಾಸ್ ನೇತೃತ್ವದಲ್ಲಿ ಆರೋಗ್ಯ ಸಚಿವಾಲಯ ಬಹಿರಂಗಪಡಿಸಿದೆ. ಇದುವರೆಗೆ 7,000ಕ್ಕೂ ಹೆಚ್ಚು ಹಮಾಸ್ ಉಗ್ರರನ್ನು ಕೊಂದಿರುವುದಾಗಿ ಇಸ್ರೇಲ್ ಘೋಷಿಸಿದೆ.

ಮಾನವೀಯ ನೆರವಿನ ಕೊರತೆ: ಈಜಿಪ್ಟ್‌ನಿಂದ ಮಾನವೀಯ ನೆರವು ಪಡೆಯುವ ರಸ್ತೆಗಳ ಮೇಲೆ ಇಸ್ರೇಲ್ ದಾಳಿಯಿಂದಾಗಿ ಗಾಜಾದಲ್ಲಿ ಆಹಾರ, ನೀರು ಮತ್ತು ಮೂಲಭೂತ ಅವಶ್ಯಕತೆಗಳ ತೀವ್ರ ಕೊರತೆಯಿದೆ. ಗಾಜಾದ 90 ಪ್ರತಿಶತ ನಾಗರಿಕರು ದಿನನಿತ್ಯದ ಆಧಾರದ ಮೇಲೆ ಸಾಕಷ್ಟು ಆಹಾರವನ್ನು ಹೊಂದಿಲ್ಲ. ಮಾನವೀಯ ಸಹಾಯವಿಲ್ಲದೆ ಅನೇಕ ಸಾಮಾನ್ಯ ನಾಗರಿಕರು ಹಸಿವು ಮತ್ತು ಕಾಯಿಲೆಯಿಂದ ಸಾಯುವ ಅಪಾಯವಿದೆ ಎಂದು ಅಂತಾರಾಷ್ಟ್ರೀಯ ನೆರವು ಗುಂಪುಗಳು ಕಳವಳ ವ್ಯಕ್ತಪಡಿಸಿವೆ.