ಬಿ747 ಜಂಬೋ ಜೆಟ್ ನಲ್ಲಿ ಭಾರತಕ್ಕೆ ಬರಲಿವೆ 8 ಚಿರತೆಗಳು: ವಿಮಾನದ ಮನಮೋಹಕ ಚಿತ್ರ ಹಂಚಿಕೊಂಡ ಅಧಿಕಾರಿಗಳು

ವಿಂಡ್‌ಹೋಕ್‌: ವಿಶೇಷ ವಿಮಾನವೊಂದು ನಮೀಬಿಯಾದಿಂದ ಭಾರತಕ್ಕೆ ಚಿರತೆಗಳನ್ನು ಕರೆತರುತ್ತಿರುವ ಸುಂದರ ಚಿತ್ರ ಕಣ್ಮುಂದೆ ಬಂದಿದೆ. ಇದರಲ್ಲಿ ಚಿರತೆಗಳ ಸುಂದರ ವರ್ಣಚಿತ್ರಗಳನ್ನು ಮಾಡಲಾಗಿದೆ. ವಿಮಾನಯಾನ ಸಂಸ್ಥೆಯು ಈ ವಿಮಾನಕ್ಕೆ 118 ಎನ್ನುವ ವಿಶೇಷ ಸಂಖ್ಯೆ ನೀಡಿದೆ. ಈ ಕಂಪನಿಯು ಇದೆ ಮೊದಲ ಬಾರಿಗೆ ಚಿರತೆಗಳನ್ನು ಸ್ಥಳಾಂತರಿಸುತ್ತಿದೆ. ಈ ದೊಡ್ಡ ವಿಮಾನದಲ್ಲಿ 8 ಚಿರತೆಗಳನ್ನು ಭಾರತಕ್ಕೆ ತರಲಾಗುವುದು.

ಚಿರತೆಗಳನ್ನು ಭಾರತಕ್ಕೆ ತರಲು ವಿಶೇಷ ವಿಮಾನ ನಮೀಬಿಯಾಕ್ಕೆ ಆಗಮಿಸಿದ್ದು, ನಮೀಬಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ವಿಮಾನದ ಚಿತ್ರವನ್ನು ಟ್ವೀಟ್ ಮಾಡಿದೆ.

ವಿಶೇಷ ವಿಮಾನ ಬಿ747 ಜಂಬೋ ಜೆಟ್ 8 ಚಿರತೆಗಳನ್ನು ಹೊತ್ತು ಸೆಪ್ಟೆಂಬರ್ 16 ಶುಕ್ರವಾರ ನಮೀಬಿಯಾದಿಂದ ಭಾರತಕ್ಕೆ ಹಾರಲಿದೆ. ವಿಮಾನಯಾನ ಕಂಪನಿಯ ಹೇಳಿಕೆಯ ಪ್ರಕಾರ ಶುಕ್ರವಾರ ರಾತ್ರಿ ಪ್ರಯಾಣ ಬೆಳೆಸಲಿರುವ ವಿಮಾನ ಸೆ.17ರಂದು ಬೆಳಗ್ಗೆ ಜೈಪುರ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ. ಅಲ್ಲಿಂದ ಚಿರತೆಗಳನ್ನು ಹೆಲಿಕಾಪ್ಟರ್ ಮೂಲಕ ಮಧ್ಯಪ್ರದೇಶದ ಕುನೊ ಅಭಯಾರಣ್ಯಕ್ಕೆ ಕೊಂಡೊಯ್ಯಲಾಗುವುದು.

ನಮೀಬಿಯಾದ ರಾಜಧಾನಿ ವಿಂಡ್‌ಹೋಕ್‌ನಿಂದ ನವದೆಹಲಿಗೆ ವಿಮಾನ ಪ್ರಯಾಣವು 4 ನಿಲ್ದಾಣಗಳೊಂದಿಗೆ 16 ಗಂಟೆ 40 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಕಾರ್ಗೋ ವಿಮಾನದಿಂದ ಹೆಲಿಕಾಪ್ಟರ್‌ಗೆ ಚಿರತೆಗಳನ್ನು ಸ್ಥಳಾಂತರಿಸಿದ ಬಳಿಕ ಮತ್ತು ಇತರ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ, 1 ಗಂಟೆ ಪ್ರಯಾಣ ಮಾಡಿ ಕುನೊ-ಪಾಲ್ಪುರದ ಹೆಲಿಪ್ಯಾಡ್‌ಗೆ ತಲುಪಲಿವೆ ಎನ್ನಲಾಗಿದೆ.