ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಎರಡನೇ ಗ್ಯಾರೆಂಟಿಯಾದ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಫಲಾನುಭವಿಗಳಿಗೆ ಐದು ಕೆಜಿ ಅಕ್ಕಿ ಬದಲಿಗೆ ನಗದು ವರ್ಗಾವಣೆ ಮಾಡುವ ಕಾರ್ಯಕ್ರಮಕ್ಕೆ ಈಗಾಗಲೆ ಚಾಲನೆ ದೊರೆತಿದೆ.
ಜು.10 ರಂದು ಕಾರ್ಯಕ್ರಮಕ್ಕೆ ಚಾಲನೆ ದೊರೆತ ನಂತರ ಇದುವರೆಗೆ ರಾಜ್ಯ ಸರ್ಕಾರ 24 ಜಿಲ್ಲೆಯ 78.4 ಲಕ್ಷ ಫಲಾನುಭವಿಗಳಿಗೆ 456.73 ಕೋಟಿ ರೂ. ಜಮಾ ಮಾಡಿದೆ.
ಇನ್ನುಳಿದ ಏಳು ಜಿಲ್ಲೆಗಳಲ್ಲಿ ಫಲಾನುಭವಿಗಳಿಗೆ ನೇರ ಲಾಭ ವರ್ಗಾವಣೆ (DBT) ಪ್ರಕ್ರಿಯೆಯಲ್ಲಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಿದ ಮಾಹಿತಿ ಪ್ರಕಾರ, ಒಂದು ಕಡತವು ಕೇವಲ 20,000 ನೇರ ಲಾಭ ವರ್ಗಾವಣೆಯನ್ನು ಪ್ರಕ್ರಿಯೆಗೊಳಿಸಬಹುದು. ಪ್ರತಿ ಜಿಲ್ಲೆಗೆ ಬಹು ಕಡತಗಳನ್ನು ರಚಿಸಬೇಕಾಗಿದೆ. ಇದು ಸಮಯ ತೆಗೆದುಕೊಳ್ಳುವುದರಿಂದ, ಪಾವತಿಗಳು ವಿಳಂಬವಾಗಿದೆ ಆದರೆ ಅವು ಎಂಟು ದಿನಗಳಲ್ಲಿ ಪೂರ್ಣಗೊಳ್ಳುತ್ತವೆ ಎಂದು ತಿಳಿಸಿದೆ.
ಚಾಮರಾಜನಗರ, ವಿಜಯಪುರ, ಹಾಸನ, ಚಿಕ್ಕಬಳ್ಳಾಪುರ, ಉಡುಪಿ, ವಿಜಯನಗರ, ಮತ್ತು ಶಿವಮೊಗ್ಗ ಜಿಲ್ಲೆಗಳ ಫಲಾನುಭವಿ ಖಾತೆಗಳಿಗೆ ಹಣ ಜಮೆಯಾಗಬೇಕಿದೆ. ಈ ಜಿಲ್ಲೆಗಳಲ್ಲಿ ಒಟ್ಟು 18.86 ಲಕ್ಷ ಫಲಾನುಭವಿಗಳಿದ್ದಾರೆ. ಸರ್ಕಾರವು ಪ್ರತಿ ಫಲಾನುಭವಿಗೆ ತಿಂಗಳಿಗೆ ಕೇಜಿಗೆ 34 ರೂ. ನಂತೆ ಐದು ಕೇಜಿಗೆ 170 ರೂ. ವರ್ಗಾಯಿಸುತ್ತದೆ. ಕುಟುಂಬದ ಮುಖ್ಯಸ್ಥರ ಆಧಾರ್ ಸಂಖ್ಯೆಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ ಈ ಹಣ ಜಮೆಯಾಗುತ್ತದೆ. ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿದ ನಂತರ ಸರ್ಕಾರ ಹಣ ಜಮೆಗೆ ನಿರ್ಧರಿಸಿದೆ.
ರಾಜ್ಯದಲ್ಲಿ 1.28 ಕೋಟಿ ಪಡಿತರ ಚೀಟಿದಾರರಿದ್ದರೂ ಪ್ರಸ್ತುತ 97,27,160 ಮಂದಿ ಈ ಯೋಜನೆಗೆ ಅರ್ಹರಾಗಿದ್ದಾರೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ, ಕಳೆದ ಮೂರು ತಿಂಗಳಿನಿಂದ ಯೋಜನೆಯ ಪ್ರಯೋಜನ ಪಡೆಯದ ಸುಮಾರು 8.7 ಲಕ್ಷ ಪಡಿತರ ಚೀಟಿದಾರರನ್ನು ಇದೀಗ ಯೋಜನೆಯಿಂದ ಹೊರಗಿಡಲಾಗಿದೆ. ಸುಮಾರು 21 ಲಕ್ಷ ಕಾರ್ಡ್ ಹೊಂದಿರುವವರು ಇನ್ನೂ ಅರ್ಹತೆ ಪಡೆದಿಲ್ಲ. ಅವರಲ್ಲಿ ಹೆಚ್ಚಿನವರು ತಮ್ಮ ಆಧಾರ್ ಅನ್ನು ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಿಲ್ಲ ಮತ್ತು ಅವರಲ್ಲಿ ಕೆಲವರು ಬ್ಯಾಂಕ್ ಖಾತೆಗಳನ್ನು ಹೊಂದಿಲ್ಲ ಎಂದು ತಿಳಿಸಿದರು.
ಬ್ಯಾಂಕ್ ಖಾತೆಗಳನ್ನು ಹೊಂದಿರದ ಅಥವಾ ಆಧಾರ್‌ನೊಂದಿಗೆ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡದ ಪಡಿತರ ಚೀಟಿದಾರರ ಹೆಸರನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಸಿಬ್ಬಂದಿ ತಿಳಿಸುತ್ತಾರೆ. ಅವರು ಆಧಾರ್ ಸೀಡಿಂಗ್ ಅಥವಾ ಅಂಚೆ ಕಚೇರಿಗಳಲ್ಲಿ ಖಾತೆಗಳನ್ನು ತೆರೆಯಬಹುದು ಎಂದು ಹೇಳಿದರು.