ಮಣಿಪಾಲ: ಮಾಹೆಯ ಉನ್ನತ ಶಿಕ್ಷಣ ಅಕಾಡೆಮಿ ವತಿಯಿಂದ ದೇಶಭಕ್ತಿ ತುಂಬಿದ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮಾಹೆಯ ಕುಲಪತಿ ಡಾ.ಎಚ್.ಎಸ್. ಬಲ್ಲಾಳ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಧ್ವಜಾರೋಹಣ ನೆರವೇರಿಸಿ,1955 ರ ವಿಲ್ಲಿಸ್ ಜೀಪ್ ನಲ್ಲಿ ಒಟ್ಟು ಇಪ್ಪತ್ಮೂರು ತುಕಡಿಗಳು ಭಾಗವಹಿಸಿದ್ದ ಪರೇಡ್ ತಂಡಗಳ ಪರಿಶೀಲನೆ ನಡೆಸಿದರು.
ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ.ವೆಂಕಟೇಶ್ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಿದರು. ಮಾಹಿತಿ-ತಂತ್ರಜ್ಞಾನ, ಬ್ಯಾಂಕಿಂಗ್ ತಂತ್ರಜ್ಞಾನ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಭಾರತವು ಹೇಗೆ ಮುನ್ನಡೆಯುತ್ತದೆ ಎಂಬ ಅಂಶವನ್ನು ಅವರು ಒತ್ತಿ ಹೇಳಿದ ಅವರು, ಭಾರತವನ್ನು ಅದರ ಅರ್ಹತೆಯ ಉತ್ತುಂಗಕ್ಕೆ ಕೊಂಡೊಯ್ಯಲು ಯುವಕರು ಶ್ರಮಿಸುವಂತೆ ಪ್ರೇರೇಪಿಸಿದರು.
ಪಥ ಸಂಚಲನ ನಡೆಸಿದ ತುಕಡಿಗಳನ್ನು ಅವರ ವೃತ್ತಿಪರ ನಡವಳಿಕೆಗಾಗಿ ಅಭಿನಂದಿಸಿದರು.
ಪಥಸಂಚಲದಲ್ಲಿ ಅಗ್ರ ತಂಡಗಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಡಬ್ಯ್ಲೂ.ಜಿ.ಎಸ್.ಎಚ್.ಎ ಪ್ರಥಮ, ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್ ದ್ವಿತೀಯ ಮತ್ತು ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ತೃತೀಯ ಬಹುಮಾನ ಪಡೆಯಿತು. ಮಾಹೆಯ ಸಾಂಸ್ಕೃತಿಕ ಸಮನ್ವಯ ಸಮಿತಿ ಏರ್ಪಡಿಸಿದ್ದ ವೈವಿಧ್ಯಮಯ ಸ್ಪರ್ಧೆಯಲ್ಲಿ ವಿಜೇತರಾದ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಮಾಹೆಯ ಪದಾಧಿಕಾರಿಗಳು, ಅಧ್ಯಾಪಕ-ಅಧ್ಯಾಪಕೇತರ ವೃಂದದವರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಮಣಿಪಾಲ ವೈದ್ಯಕೀಯ ಮಹಾವಿದ್ಯಾಲ, ಮೆಲಕ ಕಾರ್ಯಕ್ರಮವನ್ನು ಸಂಯೋಜಿಸಿತ್ತು. ಎಂಎಂಎಂಸಿ ಡೀನ್ ಡಾ ಉಲ್ಲಾಸ್ ಕಾಮತ್ ಸ್ವಾಗತಿಸಿದರು. ಲೆ.ಧುಂಡೇಶ್ ಚಿನಿವಾರ್ ಪರೇಡ್ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದರು. ಡಾ ಸಂಬಿತ್ ದಾಶ್ ನಿರೂಪಿಸಿದರು.