ಅಯೋಧ್ಯೆ ತೆರಳುವ ಮಾರ್ಗದಲ್ಲಿ ಬಸ್-ಟ್ರಕ್ ಮುಖಾಮುಖಿ: ಕರ್ನಾಟಕದ 7 ಪ್ರಯಾಣಿಕರು ಮೃತ್ಯುವಶ, 9 ಮಂದಿ ಗಾಯಾಳು

ಬಹ್ರೈಚ್‌: ಕರ್ನಾಟಕದಿಂದ 16 ಜನರನ್ನು ಅಯೋಧ್ಯೆಗೆ ಹೊತ್ತೊಯ್ಯುತ್ತಿದ್ದ ಬಸ್ ಒಂದು ಬಹ್ರೈಚ್‌ನ ಮೋತಿಪುರ್ ಪ್ರದೇಶದ ನಾನಿಹಾ ಮಾರುಕಟ್ಟೆಯಲ್ಲಿ ಟ್ರಕ್ ಒಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ 7 ಪ್ರಯಾಣಿಕರು ಅಸುನೀಗಿದ್ದು, 9 ಮಂದಿ ಗಾಯಗೊಂಡಿದ್ದಾರೆ ಎಂದು ಈ ಯುಪಿ ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಉತ್ತರ ಪ್ರದೇಶದ ಬಹ್ರೈಚ್-ಲಖಿಂಪುರ ಹೆದ್ದಾರಿಯಲ್ಲಿ ಪ್ರವಾಸಿ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದು ಮೂವರು ಮಹಿಳೆಯರು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಚಾಲಕ ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದರು, ಒಂಬತ್ತು ಜನರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.

ಗಾಯಗೊಂಡ ಪ್ರಯಾಣಿಕರಲ್ಲಿ ಒಬ್ಬರಾದ ಭೂಮಿಕಾ (16) ಪೊಲೀಸ್ ಅಧಿಕಾರಿಗಳನ್ನು ವೀಡಿಯೊ ಕರೆ ಮತ್ತು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಕುಟುಂಬ ಸದಸ್ಯರೊಂದಿಗೆ ಸಂಪರ್ಕಿಸಿದ ನಂತರ ಅಸುನೀಗಿದವರನ್ನು ಗುರುತಿಸಲಾಗಿದೆ. ಮೃತರನ್ನು ಕರ್ನಾಟಕದ ಬೀದರ್ ಜಿಲ್ಲೆಯ ಗಾಂಧಿಗಂಜ್ ನಿವಾಸಿಗಳಾದ ಶಿವಕುಮಾರ ಪೂಜಾರಿ (28), ಜಗದಾಂಬ (52), ಮನ್ಮತ್ (36), ಅನಿಲ್ (30), ಸಂತೋಷ್ (35), ಶಶಿಕಲಾ (38) ಮತ್ತು ಸರಸ್ವತಿ (47) ಎಂದು ಗುರುತಿಸಲಾಗಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾವಿಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಘಟನೆ ಬಳಿಕ ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಎಎಸ್ಪಿ ಹೇಳಿದ್ದಾರೆ.