ಡಿ.4 ರಂದು ಹೂಡೆಯಲ್ಲಿ ಕೋಟ ಮೂರ್ತೆದಾರರ ಸೇ.ಸ.ಸಂಘ ದ 6ನೇ ಶಾಖೆ ಶುಭಾರಂಭ

ಉಡುಪಿ: ಕೋಟ ಮೂರ್ತೆದಾರರ ಸೇವಾ ಸಹಕಾರಿ ಸಂಘ ತನ್ನ 31ನೇ ವರ್ಷದ ಸಂಭ್ರಮಾಚರಣೆಯಲ್ಲಿದ್ದು, ಈ ಸಂದರ್ಭದಲ್ಲಿ ಸಂಪೂರ್ಣ ಹವಾನಿಯಂತ್ರಿತ 6ನೇ ಶಾಖೆಯು ತೋನ್ಸೆ ಹೂಡೆಯ ಮೀನು ಮಾರ್ಕೆಟ್ ಎದುರಿನ ‘ಸಿಂಧೂರ ಕಾಂಪ್ಲೆಕ್ಸ್’ನಲ್ಲಿ ಡಿಸೆಂಬರ್ 4 ರಂದು ಬೆಳಿಗ್ಗೆ 10 ಗಂಟೆಗೆ ಶುಭಾರಂಭಗೊಳ್ಳಲಿದೆ. ಸಂಘವು ಕೋಟದಲ್ಲಿ ಸ್ವಂತ ಸುಸಜ್ಜಿತ ಕೇಂದ್ರ ಕಚೇರಿ ಹಾಗೂ ವಾಣಿಜ್ಯ ಸಂಕೀರ್ಣ ಮತ್ತು ಸಭಾಭವನ ಹೊಂದಿದ್ದು, ಸಾಸ್ತಾನ ಶಾಖೆ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪಾಲು ಬಂಡವಾಳ 1.26 ಕೋಟಿ ರೂ., ಠೇವಣಿ 62 ಕೋಟಿ ರೂ., ಹೂಡಿಕೆಗಳು 20 ಕೋಟಿ ರೂ., ಹೊರಬಾಕಿ ಸಾಲ 48 ಕೋಟಿ ರೂ., ನಿಧಿಗಳು 7.50 ಕೋಟಿ ರೂ., ಸ್ಥಿರಾಸ್ತಿ ಮತ್ತು ಕಟ್ಟಡ 15 ಕೋಟಿ ರೂ., ಚರಾಸ್ತಿ 5 ಕೋಟಿ ರೂ. ಹಾಗೂ ಪ್ರಸ್ತುತ ವಾರ್ಷಿಕ ವಹಿವಾಟು 110 ಕೋಟಿ ರೂ., ಹೊಂದಿರುತ್ತದೆ. ಮಹಿಳಾ ಸಶಕ್ತೀಕರಣಕ್ಕಾಗಿ 274 ಕಲ್ಪತರು ಮಹಿಳಾ ಸ್ವ -ಸಹಾಯ ಗುಂಪುಗಳನ್ನು ಪ್ರಾಯೋಜಿಸಿದ್ದು 7.39 ಕೋಟಿ ರೂ. ಸಾಲ ಸೌಲಭ್ಯ ಒದಗಿಸಲಾಗಿದೆ. ಸತತ 26 ವರ್ಷಗಳಿಂದ ‘ಎ’ ವರ್ಗದ ಆಡಿಟ್ ವರ್ಗೀಕರಣ ಪಡೆದಿದ್ದು ಪ್ರಸ್ತುತ ಸಾಲಿನಲ್ಲಿ 94.49 ಲಕ್ಷ ರೂ. ಲಾಭಗಳಿಸಿರುತ್ತದೆ.

ಸಂಘವು ಸೇಫ್ ಡಿಪೋಸಿಟ್ ಲಾಕರ್, ಇ- ಸ್ಟ್ಯಾಂಪಿಗ್, ಆರ್.ಟಿ.ಸಿ. ಹಾಗೂ ನೆಫ್ಟ್, ಆರ್.ಟಿ.ಜಿ.ಎಸ್. ಸೌಲಭ್ಯ ಹೊಂದಿರುತ್ತದೆ.

ನೂತನ ಶಾಖೆಯನ್ನು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು, ಭದ್ರತಾ ಕೊಠಡಿಯನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಸೇಫ್ ಡಿಪೋಸಿಟ್ ಲಾಕರ್ ಅನ್ನು ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಇ- ಸ್ಟ್ಯಾಂಪಿಗ್ ಹಾಗೂ ಆರ್.ಟಿ.ಸಿ. ವಿತರಣೆಯನ್ನು ಶಾಸಕ ಕೆ. ರಘುಪತಿ ಭಟ್, ಗಣಕೀಕರಣವನ್ನು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಲಿದ್ದಾರೆ.

ಸಂಘದ ಅಧ್ಯಕ್ಷ ಕೆ. ಕೊರಗ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಕುಂದಾಪುರ ಸಹಕಾರಿ ಸಂಘಗಳ ಸಹಾಯಕ ನಿಬಂಧಕಿ ಲಾವಣ್ಯ ಕೆ.ಎಸ್., ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಸತೀಶ್ ಶೆಟ್ಟಿ, ಶ್ರೀ ಗಜಾನನ ಬಿಲ್ಲವ ಸೇವಾ ಸಂಘ ಹೂಡಿಕೆಯ ಅಧ್ಯಕ್ಷ ಶಂಕರ ಅಂಚನ್ ಹೂಡೆ, ಉಡುಪಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ವೆರೋನಿಕಾ ಕರ್ನೆಲಿಯೊ, ಬೀಚ್ ಹೀಲಿಂಗ್ ಸೆಂಟರ್ ಹೂಡೆಯ ಡಾ| ರಫೀಕ್ ಹೂಡೆ, ಕೆಮ್ಮಣ್ಣು ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ, ತೋನ್ಸೆ ನಾಲ್ಕು ಪಟ್ಣ ಮೊಗವೀರ ಮಹಾಜನ ಸಂಘ ಗುಜ್ಜರ್ ಬೆಟ್ಟು ಇದರ ಅಧ್ಯಕ್ಷ ವೆಂಕಟೇಶ್ ಕುಂದರ್, ಬಿಲ್ಲವ ಒಕ್ಕೂಟ ತೋನ್ಸೆ ಅಧ್ಯಕ್ಷ ರಮೇಶ್ ಪೂಜಾರಿ, ಕಲ್ಯಾಣಪುರ ಸಂತೆಕಟ್ಟೆ ಬಿಲ್ಲವರ ಸೇವಾ ಸಂಘದ ಗೌರವಾಧ್ಯಕ್ಷ ಭಾಸ್ಕರ್ ಜತ್ತನ್, ಶ್ರೀ ಗುರು ರಾಘವೇಂದ್ರ ಭಜನ ಮಂಡಳಿ ಪಡುತೋನ್ಸೆ ಗುಜ್ಜರ್ ಬೆಟ್ಟು ಇದರ ಅಧ್ಯಕ್ಷ ಸುಂದರ್ ಗುಜ್ಜರ್ ಬೆಟ್ಟು, ಬೆಂಗ್ರೆ ಬಿಲ್ಲವರ ಸೇವಾ ಸಂಘ ಅಧ್ಯಕ್ಷ ಕೃಷ್ಣ ಅಂಚನ್, ಗಜಾನನ ಫ್ರೆಂಡ್ಸ್ ಕ್ಲಬ್ ಹೂಡೆ ಅಧ್ಯಕ್ಷ ಪ್ರತಾಪ್ ಕೆ. ಪೂಜಾರಿ ಭಾಗವಹಿಸಲಿದ್ದಾರೆ ಎಂದು ಸಂಘದ ಪ್ರಧಾನ ವ್ಯವಸ್ಥಾಪಕ ಜಗದೀಶ್ ಕೆಮ್ಮಣ್ಣು ತಿಳಿಸಿದರು.