ಮಂಗಳೂರು: ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ 6ನೇ ವರ್ಷದ ಹಲಸು ಹಬ್ಬ ಜೂನ್ 3 ಮತ್ತು 4ರಂದು ಶರವು ದೇವಳ ಬಳಿಯ ಬಾಳಂಭಟ್ ಹಾಲ್ನಲ್ಲಿ ನಡೆಯಲಿದೆ.
ಜೂನ್ 3ರಂದು ಬೆಳಗ್ಗೆ 9.30ಕ್ಕೆ ಮೇಯರ್ ಜಯಾನಂದ ಅಂಚನ್ ಸಭಾ ಕಾರ್ಯಕ್ರಮ ಉದ್ಘಾಟಿಸುವರು. ಭಟ್ ಆಯಂಡ್ ಭಟ್ ಯೂ ಟ್ಯೂಬ್ ಚಾನಲ್ನ ಸುದರ್ಶನ್ ಭಟ್ ಬೆದ್ರಾಡಿ ಹಲಸು ಹಣ್ಣು ತುಂಡು ಮಾಡಿ ಹಬ್ಬಕ್ಕೆ ಚಾಲನೆ ನೀಡುವರು. ಹೋಳಿಗೆ ಮಾಡಿ ಹಲಸು ಮೌಲ್ಯ ವರ್ಧನೆ ಮಾಡಿದ ಲಕ್ಷ್ಮೀ ಚಿದಾನಂದರನ್ನು ಉಪಮೇಯರ್ ಪೂರ್ಣಿಮಾ ಸನ್ಮಾನಿಸಲಿದ್ದಾರೆ.
ಹಲಸಿನ ಹಬ್ಬದ ವಿಶೇಷತೆ:
ಈ ಬಾರಿಯ ಹಲಸಿನ ಹಬ್ಬದಲ್ಲಿ ಹಲಸಿನ ವಿವಿಧ ಮೌಲ್ಯ ವರ್ಧಿತ ತಿಂಡಿಗಳು, ಬಣ್ಣದ ರುದ್ರಾಕ್ಷಿ, ಚಂದ್ರ ಹಲಸು, ಬಕ್ಕೆ ಹಲಸು, ಬಂಗಾರದ ಬಣ್ಣದ ಹಲಸು, ಹಲಸಿನ ಐಸ್ ಕ್ರೀಂ, ಹಲಸಿನ ಹೋಳಿಗೆ, ಹಲಸಿನ ಗಿಡಗಳು ಲಭ್ಯವಿವೆ.
ಅಲ್ಲದೇ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸಾವಯವ ರೈತರು ಬೆಳೆದ ವಿವಿಧ ದಿನಸಿ, ಹಣ್ಣುಗಳ ಮಾರಾಟದ ವ್ಯವಸ್ಥೆಯೂ ಇದೆ. ನೇರವಾಗಿ ರೈತರೇ ಮಾರಾಟದಲ್ಲಿ ಪಾಲ್ಗೊಳ್ಳುವುದು ವಿಶೇಷ. ರೈತರಿಂದ ನೇರವಾಗಿ ಗ್ರಾಹಕರಿಗೆ ಪೂರೈಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಬೆಳಗ್ಗೆ 7 ರಿಂದ ಸಂಜೆ 7 ರ ತನಕ ಸಾರ್ವಜನಿಕರ ಭೇಟಿಗೆ ಮುಕ್ತ ಅವಕಾಶವಿದೆ ಎಂದು ಸಾವಯವ ಕೃಷಿಕ ಗ್ರಾಹಕ ಬಳಗದ ಪ್ರಕಟಣೆ ತಿಳಿಸಿದೆ.