ರಷ್ಯಾದಲ್ಲಿ ಐಸಿಸ್ ಭಯೋತ್ಪಾದಕ ದಾಳಿ: ಕನಿಷ್ಠ 60 ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

ಮಾಸ್ಕೋ: ಇಲ್ಲಿನ ಕ್ರೋಕಸ್ ಸಿಟಿ ಹಾಲ್‌ನಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮವೊಂದಕ್ಕೆ ನುಗ್ಗಿದ ಅಪರಿಚಿತ ಶಸ್ತ್ರಧಾರಿಗಳ ಗುಂಪೊಂದು ಏಕಾಏಕಿ ಗುಂಡಿನ ಮಳೆಗರೆದಿದ್ದು, ಈ ಘಟನೆಯಲ್ಲಿ ಕನಿಷ್ಟ 60 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, 100 ಕ್ಕೂ ಅಧಿಕ ಮಂದಿ ತೀವ್ರ ಗಾಯಗೊಂಡಿದ್ದಾರೆ.

ಐದು ಮಕ್ಕಳು ಸೇರಿದಂತೆ 115 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ರಷ್ಯಾದ ಆರೋಗ್ಯ ಸಚಿವ ಮಿಖಾಯಿಲ್ ಮುರಾಶ್ಕೊ ಹೇಳಿದ್ದಾರೆ. 110 ವಯಸ್ಕ ರೋಗಿಗಳಲ್ಲಿ 60 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಅವರು ಹೇಳಿದರು.

ಈ ಘಟನೆಯ ಬಗ್ಗೆ ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್‌ ಅನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ಸಾವಿರಕ್ಕೂ ಅಧಿಕ ಮಂದಿ ನೆರೆದಿದ್ದ ಈ ಸಮಾರಂಭವನ್ನು ಗುರಿಯಾಗಿಟ್ಟು ಕಳೆದ ರಾತ್ರಿ ಈ ಭೀಭತ್ಸ್ಯ ಘಟನೆ ನಡೆದಿದೆ. ಮೇಲ್ನೋಟಕ್ಕೆ ಇದೊಂದು ಉಗ್ರರ ಕೃತ್ಯ ಎಂದು ಶಂಕಿಸಲಾಗಿದೆ.

ಗುಂಡಿನ ದಾಳಿ ಆರಂಭವಾಗುತ್ತಲೇ ಏನಾಗುತ್ತಿದೆ ಎಂದು ಅರಿಯದೆ ಜನ ದಿಕ್ಕಾಪಾಲಾಗಿ ಓಡಿದ್ದು, ಈ ವೇಳೆ ಕೆಲವರು ಕಾಲ್ತುಳಿತಕ್ಕೆ ಸಿಲುಕಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಸಾವು ನೋವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಈ ನರಮೇಧದ ಹೊಣೆಯನ್ನು ಐ.ಎಸ್.ಐ.ಎಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ ಎಂದೂ ಅದು ವರದಿ ಮಾಡಿದೆ.