ಮುಂಬೈ: ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ಗಳಿಸಿಕೊಡುವುದಾಗಿ ನಂಬಿಸಿ ಸೈಬರ್ ವಂಚಕರು 59 ವರ್ಷದ ವ್ಯಕ್ತಿಯೊಬ್ಬರಿಗೆ ₹6.80 ಕೋಟಿ ವಂಚಿಸಿರುವ ಘಟನೆ ದಕ್ಷಿಣ ಮುಂಬೈನ ಟಾರ್ಡಿಯೊ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಲಂಡನ್ ಮೂಲದ ಹಣಕಾಸು ಸಂಸ್ಥೆಯ ಹೆಸರನ್ನು ದುರುಪಯೋಗಪಡಿಸಿಕೊಂಡು ಈ ವಂಚನೆ ನಡೆಸಲಾಗಿದೆ. ಜಾಲತಾಣದಲ್ಲಿ ಪ್ರಕಟವಾದ ಹೂಡಿಕೆ ಜಾಹೀರಾತನ್ನು ನೋಡಿ ನಿವೃತ್ತ ಉದ್ಯೋಗಿಯೊಬ್ಬರು ವಂಚಕರು ರಚಿಸಿದ್ದ ವಾಟ್ಸಪ್ ಗುಂಪಿಗೆ ಸೇರಿದ್ದರು. ಈ ಗುಂಪಿನ ಮೂಲಕ ಹೂಡಿಕೆ ಸಲಹೆಗಳನ್ನು ನೀಡಲಾಗುತ್ತಿದ್ದು, ಸಂಸ್ಥೆಯ ಮೂಲಕ ಹೂಡಿಕೆ ಮಾಡಿದರೆ ಐಪಿಒ ಹಾಗೂ ಪ್ರೀ-ಐಪಿಒಗಳಲ್ಲಿ ವಿಶೇಷ ಸಾಂಸ್ಥಿಕ ವ್ಯಾಪಾರ ಅವಕಾಶಗಳನ್ನು ಪಡೆಯಬಹುದು ಎಂದು ನಂಬಿಸಲಾಗಿದೆ.
ಆರಂಭದಲ್ಲಿ ಹೂಡಿಕೆದಾರರಿಗೆ ₹20 ಸಾವಿರ ಮೊತ್ತವನ್ನು ಹಿಂಪಡೆಯಲು ಅವಕಾಶ ನೀಡಿ ವಿಶ್ವಾಸ ಮೂಡಿಸಲಾಗಿದೆ. ನಂತರ ಅವರ ವರ್ಚುವಲ್ ಖಾತೆಯಲ್ಲಿ ₹7 ಕೋಟಿಗಿಂತ ಕಡಿಮೆ ಹೂಡಿಕೆಗೆ ₹149 ಕೋಟಿ ಲಾಭ ಬಂದಿರುವಂತೆ ತೋರಿಸಲಾಗಿದೆ. ಇದನ್ನು ಕಂಡು ಮತ್ತಷ್ಟು ಹಣ ಹೂಡಿಕೆ ಮಾಡಲು ಪ್ರೇರೇಪಿಸಲಾಗಿದೆ.
ಆದರೆ ಖಾತೆಯಲ್ಲಿ ತೋರಿಸಿದ್ದ ಹಣವನ್ನು ಹಿಂಪಡೆಯಲು ಯತ್ನಿಸಿದಾಗ ಹೆಚ್ಚುವರಿ ಹೂಡಿಕೆ ಮಾಡುವಂತೆ ಒತ್ತಾಯಿಸಲಾಗಿದೆ. ಆರೋಪಿಗಳು ಪದೇ ಪದೇ ಕರೆಗಳಿಗೆ ಉತ್ತರಿಸುವುದನ್ನು ತಪ್ಪಿಸಿಕೊಳ್ಳಲು ಆರಂಭಿಸಿದಾಗ ಹೂಡಿಕೆದಾರರಿಗೆ ಅನುಮಾನ ಮೂಡಿದೆ.
ಏಪ್ರಿಲ್ 11ರಿಂದ ಮೇ 27ರವರೆಗೆ ನಡೆದ ಈ ವಂಚನೆಯಲ್ಲಿ, ಆರೋಪಿಗಳು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 48 ವಹಿವಾಟುಗಳ ಮೂಲಕ ₹6.80 ಕೋಟಿ ವರ್ಗಾಯಿಸಲಾಗಿದೆ ಎಂದು ದಕ್ಷಿಣ ಸೈಬರ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

















