ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರ ಅತ್ತೂರು: ವಾರ್ಷಿಕ ಮಹೋತ್ಸವ ಸಂಪನ್ನ

ಕಾರ್ಕಳ: ಮಹಾನ್ ಸಂತ, ಸುಪ್ರಸಿದ್ಧ, ಕಾರ್ಕಳದ ಪವಾಡ ಪುರುಷ ಸಂತ ಲಾರೆನ್ಸ್ ಬಸಿಲಿಕದ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ದೈವಾರಾಧನೆಯ ಭಕ್ತಿ ಕಾರ್ಯಗಳು ಅತ್ಯಂತ ಸುಸಜ್ಜಿತವಾಗಿ ನೆರವೇರಿಸಲಾಯಿತು.

ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ಮಹೋತ್ಸವದ ಅಂಗವಾಗಿ ‘ವಿನಮೃರಾಗಿ ಪ್ರಾರ್ಥಿಸೋಣ’ ಎಂಬ ಹಬ್ಬದ ಪ್ರಮುಖ ದಿನದ ವಿಷಯವನ್ನು ಧ್ಯಾನಿಸಲಾಯಿತು. ವಿನಯತೆಯ ಪ್ರಾರ್ಥನೆ ಅತ್ಯಂತ ಶಕ್ತಿಶಾಲಿ. ಧನ್ಯತಾ ಹೃದಯ ಹಾಗೂ ವಿನಮೃ ಪ್ರಾರ್ಥನೆ ಸರ್ವಶಕ್ತ ದೇವರಿಗೆ ಅತೀ ಮೆಚ್ಚುಗೆಯಾದಂತಹದು. ನಮ್ಮ ಪ್ರತಿಯೊಂದು ಪ್ರಾರ್ಥನೆ ವಿನಯತೆಯ ಗುಣದಿಂದ ಕೂಡಿರಬೇಕು. ವಿನಯಶೀಲನು ಸದಾ ವಿನಯತೆಯ ಸದ್ಗುಣಗಳಿಂದ ಪ್ರಾರ್ಥಿಸಿದಾಗ ಆತನ ವಿನಯ ಭಾವನೆಯ ಜಪತಪಕ್ಕೆ ಫಲ ಫಲಿಸುವುದು.

ಹಬ್ಬದ ಐದನೇ ದಿನದಂದು ಜನಸಾಗರವು ವಿವಿಧ ದಿಕ್ಕು-ದಿಕ್ಕುಗಳಿಂದಲೂ ಮೂಲೆ-ಮೂಲೆಗಳಿಂದಲೂ ಪುಣ್ಯಕ್ಷೇತ್ರಕ್ಕೆ ಭೇಟಿಯನ್ನು ನೀಡಿ ತಮ್ಮ ದೈವಕಾರ್ಯಗಳನ್ನು ನೆರವೇರಿಸಿದರು.

ಜನಸಾಗರವು ಅಧಿಕ ಸಂಖ್ಯೆಗೂ ಮೀರಿದ್ದೂ ಅತ್ತೂರು ಪುಣ್ಯಕ್ಷೇತ್ರದ ಸುತ್ತಮುತ್ತ ಹಬ್ಬದ ಕಲರವ ಹಾಗೂ ಮೆರುಗು ಇನ್ನಷ್ಟು ಹೆಚ್ಚಿ ಇಮ್ಮಡಿಯಾಯಿತು.

ಪಾಲಕ ಸಂತ ಲಾರೆನ್ಸರ ಪ್ರತಿಷ್ಠಾಪಿಸಲಾದ ಮೂರ್ತಿಯ ಬಳಿ ವಿಶೇಷವಾಗಿ ಪ್ರಾರ್ಥಿಸಿ ದೈವಿಕ ಆಶೀರ್ವಾದವನ್ನು ಪಡೆದರು. ಪವಾಡ ಮೂರ್ತಿಯ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನಸಾಗರ ಸಾಲುಸಾಲು ನಿಂತು ಭಕ್ತಿಪರವಶೆಯಿಂದ ಪ್ರಾರ್ಥಿಸಿದರು. ವಿವಿಧ ಜನರು ತಮ್ಮ ಹರಕೆ, ಪ್ರಾರ್ಥನೆ, ವಿವಿಧ ಕೋರಿಗಳನ್ನು ದಿನವಿಡೀ ಸಲ್ಲಿಸಿ ಸಂತೋಷದಿಂದ ಸಂತೃಪ್ತಿಯಿಂದ ಹಿಂತಿರುಗಿದರು.

ಸಂತ ಲಾರೆನ್ಸರ ಪವಾಡ ಮೂರ್ತಿಯ ಗುಡಿಯ ಬಳಿ ಪ್ರೋಕ್ಷ ತೀರ್ಥ ಹಾಗೂ ಪುಷ್ಪ ತೀರ್ಥವನ್ನು ಭಕ್ತಜನಸಾಗರಕ್ಕೆ ನೀಡಲಾಯಿತು. ಪವಾಡ ಮೂರ್ತಿಯ ದಿವ್ಯ ಪ್ರಸನ್ನತೆಯನ್ನು ಕಂಡ ಭಕ್ತಜನರು ಸಾವಿರಾರು ಸಂಖ್ಯೆಯಲ್ಲಿ ಧನ್ಯತಾ ಭಾವದಿಂದ ಧಾವಿಸಿ ಸಂತೃಪ್ತರಾದರು. ಅಂತೆಯೇ ಯಕೋಬನ ಪತ್ರದಿಂದ ಆರಿಸಲ್ಪಟ್ಟಂತಹ ದೈವವಾಕ್ಯ ವಿನಮೃರಾಗಿ ಪ್ರಾರ್ಥಿಸೋಣ ಪ್ರವಚನಕ್ಕೆ ಆರಿಸಲ್ಪಟ್ಟ ಪ್ರಮುಖ ಧ್ಯಾನದ ವಿಷಯವಾಗಿತ್ತು.

ವಾರ್ಷಿಕ ಮಹೋತ್ಸವದ ಪ್ರಮುಖ ಸಾಂಭ್ರಾಮಿಕ ಆಡಂಭರದ ಗಾಯನ ಬಲಿಪೂಜೆಯನ್ನು ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಂದತಹ ಪರಮಪೂಜ್ಯ ಪೀಟರ್ ಪೌಲ್ ಸಲ್ಡಾನ್ಹಾ ನೆರವೇರಿಸಿ ಧರ್ಮಸಭೆ ಯೇಸುಕ್ರಿಸ್ತರ ಜೂಬಿಲಿ ವರ್ಷದ ಸಂಭ್ರಮದ ಉತ್ಸವದಲ್ಲಿದೆ. ಜೂಬಿಲಿ ವರ್ಷದ ಮುಖ್ಯ ಸಂದೇಶ ಪ್ರಾರ್ಥನೆ. ಪುಣ್ಯಕ್ಷೇತ್ರದ ಈ ವರ್ಷದ ಸಂದೇಶವೂ ಕೂಡ ಪ್ರಾರ್ಥನೆಯ ವಿಷಯವಾಗಿದೆ. ವಿನಯತೆಯ ಪ್ರಾರ್ಥನೆ ಫಲಭರಿತವಾದದ್ದು. ನಮ್ಮ ಪ್ರಾರ್ಥನೆ ನಿರಂತರವಾಗಿ, ವಿನಯತೆಯೆಂದ, ದುಖಿಃಸಿ ಸದಾಕಾಲ ಪ್ರಾರ್ಥಿಸುವಂತಿರಬೇಕು. ಅದುವೇ ಕ್ರಿಸ್ತನು ಕಲಿಸಿದ ಪಾರ್ಥನಾ ಮಾರ್ಗ. ನಮ್ಮ ಪ್ರಾರ್ಥನೆ ಅಧೈರ್ಯದಿಂದಲ್ಲ ಬದಲಾಗಿ ಧೈರ್ಯದಿಂದ ಕೂಡಿರಬೇಕು ಎಂದು ತಮ್ಮ ಪ್ರಭೋದನೆಯಲ್ಲಿ ನುಡಿದರು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಕಾಪು, ಸರ್ಕಾರದ ಮುಖ್ಯ ಸಚೇತಕ ಶ್ರೀ ಐವನ್ ಡಿ’ಸೋಜ, ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರು, ಡಾ. ಅನುಶುವಾನ್, ಉಡುಪಿ ಜಿಲ್ಲಾ ಅಧ್ಯಕ್ಷರು ಅಶೋಕ್ ಕುಮಾರ್ ಕೊಡವೂರು ಇವರುಗಳು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದರು.

ದಿನದ ಇತರ ಬಲಿಪೂಜೆಗಳನ್ನು ವಂದನೀಯ ವಿಶಾಲ್ ಮೋನಿಸ್, ಮಂಗಳೂರು, ಪರಮ ಪೂಜ್ಯ ಡಾ. ಪೀಟರ್ ಪೌಲ್ ಸಲ್ಡಾನ್ಹಾ ಮಂಗಳೂರು ಧರ್ಮಕ್ಷೇತ್ರ, ವಂದನೀಯ ಡೇವಿಡ್ ಪ್ರಕಾಶ್, ಚಿಕ್ಕಮಗಳೂರು, ವಂದನೀಯ ಫ್ರಾನ್ಸಿಸ್ ಕರ್ನೆಲಿಯೊ, ಪಡುಕೋಣೆ, ವಂದನೀಯ ಡೇನಿಸ್ ಡೆಸಾ, ತೊಟ್ಟಂ, ಚಿಕ್ಕಮಗಳೂರು, ರೊನಾಲ್ಡ್ ಕಾರ್ಡೋಜ, ಚಿಕ್ಕಮಗಳೂರು, ವಂದನೀಯ ವಲೇರಿಯನ್ ಮೆಂಡೋನ್ಸಾ, ಕಲ್ಯಾಣ್‌ಪುರ್, ಫ್ರಾಂಕ್ಲಿನ್ ಡಿಸೋಜ, ಶಿವಮೊಗ್ಗ, ಸ್ಟ್ಯಾನಿ ಪಿಂಟೊ, ಪುತ್ತೂರು ಇವರುಗಳು ಅರ್ಪಿಸಿದರು.

ಹಲವಾರು ಯಾತ್ರಾರ್ಥಿಗಳು ಪುಣ್ಯಕ್ಷೇತ್ರದ ತೈಲವನ್ನು ಸ್ವೀಕರಿಸಿ ಪವಿತ್ರ ಪುಪ್ಕರಣಿಯ ಸನ್ನಿಧಿ ಧಾವಿಸಿ ತೀರ್ಥವನ್ನು ಪಡೆದು, ವಿಶೇಷ ಪ್ರಾರ್ಥನೆ ಹಾಗೂ ಬಸಿಲಿಕದ ಮಹಾನ್ ಪಾಲಕ ಸಂತ ಲಾರೆನ್ಸರ ದಿವ್ಯ ಸಾನಿಧ್ಯದ ಬಳಿ ಧಾವಿಸಿ ಪ್ರಾರ್ಥಿಸಿ ತೆರಳಿದರು. ದಿನದ ಅಂತಿಮ ಬಲಿಪೂಜೆಯನ್ನು ರಾತ್ರಿ 10 ಗಂಟೆಗೆ ನೆರವೇರಿಸಿ ಮಹೋತ್ಸವದ ಐದನೇ ದಿನದ ಬಲಿಪೂಜೆಗಳನ್ನು, ಧಾರ್ಮಿಕ ಭಕ್ತಿ-ಆಚರಣೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಭಕ್ತಿಯುತವಾಗಿ ನೇರವೇರಿಸಿ ಮುಕ್ತಾಯಗೊಳಿಸಲಾಯಿತು.