ಪ್ರವಾಹ ನಿರ್ವಹಣೆ ಉಡುಪಿ ಜಿಲ್ಲೆಗೆ 5 ಕೋಟಿ ಬಿಡುಗಡೆ: ಪಡುಬಿದ್ರಿಯಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣ: ಸಚಿವ ಆರ್. ಅಶೋಕ್

ಪಡುಬಿದ್ರಿ: ಇಲ್ಲಿನ ಕಡಲ ತೀರದಲ್ಲಿ ಪ್ರತಿ ಬಾರಿ ಮಳೆಗಾಲದಲ್ಲಿ ಕಡಲ್ಕೊರತೆ ಉಂಟಾಗುತ್ತಿದ್ದು, ಇದಕ್ಕೆ ಶಾಶ್ವತ ತಡೆಗೋಡೆ ನಿರ್ಮಿಸಲು ನೀಲಾನಕ್ಷೆ ಸಿದ್ಧಪಡಿಸಿ ಕಳುಹಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಅವರು ನೀಲಾನಕ್ಷೆ ಸಿದ್ಧಪಡಿಸಿ ಪ್ರಸ್ತಾವನೆ ಕೊಟ್ಟ ಕೂಡಲೇ ಹಣ ಬಿಡುಗಡೆ ಮಾಡುತ್ತೇನೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಕಾಪು ತಾಲ್ಲೂಕಿನ ಪಡುಬಿದ್ರಿ ಕಡಲ ತೀರದಲ್ಲಿ ಉಂಟಾಗಿರುವ ಕಡಲ್ಕೊರೆತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಜ್ಯ ಸರ್ಕಾರದಲ್ಲಿ ಹಣಕ್ಕೆ ಕೊರತೆಯಿಲ್ಲ. ಕೇಂದ್ರ ಸರ್ಕಾರದ ಎನ್ ಡಿಆರ್ ಎಫ್ ನಿಧಿಯಲ್ಲಿ 200 ಕೋಟಿ ರೂ. ಹಣವಿದೆ. ಆ ಅನುದಾನದಿಂದ ಪ್ರಸ್ತಾವನೆ ಕೊಟ್ಟ ತಕ್ಷಣವೇ ಹಣ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.
ಪಡುಬಿದ್ರಿಯ ಕಡಲ ತೀರದಲ್ಲಿರುವ ಪ್ರವಾಸೋದ್ಯಮ ಸೆಂಟರ್ ಗೂ ಕಡಲ್ಕೊರೆತದಿಂದ ಹಾನಿಯಾಗಿದೆ. ಇಲ್ಲಿ ಪ್ರವಾಸೋದ್ಯಮಕ್ಕೆ ಪ್ರತಿಕೂಲವಾದ ವಾತಾವರಣ ಇದೆ. ಹಾಗಾಗಿ ಪ್ರವಾಸೋದ್ಯ ಸಚಿವರ ಜತೆ ಚರ್ಚಿಸಿ, ಇಲ್ಲಿನ ಪ್ರವಾಸೋದ್ಯಮ ಸೆಂಟರ್ ನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಸೂಚಿಸುತ್ತೇನೆ ಎಂದರು.
ಇಲ್ಲಿ ನೈಸರ್ಗಿಕವಾಗಿ ಬರುವ ಅಲೆಗಳಿಗೆ ಟೂರಿಸಂ ಸೆಂಟರ್ ಅಡೆತಡೆಯಾಗಿದ್ದು, ಇದರಿಂದ ಹೆಚ್ಚಿನ ಕಡಲ್ಕೊರೆತ ಸಂಭವಿಸುತ್ತಿದೆ. ಇಲ್ಲಿ ಬಹಳಷ್ಟು ಮನೆಗಳಿವೆ. ಸಾರ್ವಜನಿಕರಿಗೆ ಏನಾದರೂ ತೊಂದರೆ ಆದಂತಹ ಸಂದರ್ಭದಲ್ಲಿ ತುರ್ತು ಕಾರ್ಯಾಚರಣೆಗಳನ್ನು ಕೈಗೊಳ್ಳಲು ತೊಂದರೆ ಆಗುತ್ತದೆ. ಹಾಗಾಗಿ ಈ ಪ್ರವಾಸೋದ್ಯಮ ಸೆಂಟರ್ ನ್ನು ತೆರವುಗೊಳಿಸಿ, ಪೂರ್ತಿ ತಡೆಗೋಡೆ ಕಟ್ಟಲು ಪ್ರಸ್ತಾವನೆ ಕಳುಹಿಸುವಂತೆ ಸೂಚನೆ ನೀಡಿದ್ದೇನೆ ಎಂದು ಸಚಿವರು ಹೇಳಿದರು.
*ಪ್ರವಾಹ ನಿರ್ವಹಣೆ: ಉಡುಪಿಗೆ 5 ಕೋಟಿ ಬಿಡುಗಡೆ*
ಪ್ರವಾಹ ನಿರ್ವಹಣೆಗೆ ಸಂಬಂಧಿಸಿ ಉಡುಪಿ ಜಿಲ್ಲಾಡಳಿತದ ನಿಧಿಯಲ್ಲಿ 3.5. ಕೋಟಿ ರೂ. ಮೀಸಲಿಡಲಾಗಿದೆ. ಆದರೂ ತುರ್ತಾಗಿ ಸರ್ಕಾರದಿಂದ ಹೆಚ್ಚುವರಿಯಾಗಿ 5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.
*ಪ್ರವಾಹ ನಿರ್ವಹಣೆಗೆ ಸರ್ಕಾರ ಸಿದ್ಧ*
ಕೊಡಗು ಜಿಲ್ಲೆಯನ್ನು ಹೊರತು ಪಡಿಸಿ ಉಳಿದೆಡೆ ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕೊಡಗಿನ ಭಾಗಮಂಡಲದ ಅರ್ಚಕರೊಬ್ಬರು ಮನೆಯನ್ನು‌ ಖಾಲಿ ಮಾಡಲು ಒಪ್ಪದಿದ್ದ ಕಾರಣ ಅವಘಡ ಸಂಭವಿಸಿದೆ. ಅಲ್ಲಿಗೂ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ.
ಅಧಿಕಾರಿಗಳು ರಜೆ ಹಾಕದೆ ಪ್ರವಾಹ ನಿರ್ವಹಣೆಯಲ್ಲಿ ತೊಡಗಬೇಕು. ಕಂದಾಯ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಪ್ರವಾಹ ನಿರ್ವಹಣೆ ಕಾರ್ಯದಲ್ಲಿ ತೊಡಗಬೇಕು. ಪ್ರವಾಹ ನಿರ್ವಹಣೆ ಮಾಡಲು ಸರ್ಕಾರ ಎಲ್ಲ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರವಾಹ ನಿರ್ವಹಣೆಗೆ ಸರ್ಕಾರ ಸಮರ್ಥವಾಗಿದೆ ಎಂದರು.