ಕೋಲ್ಕತ್ತ: ಪೌರತ್ವ ತಿದ್ದುಪಡಿ ಕಾಯ್ದೆ (CAA) ವ್ಯಾಪ್ತಿಗೆ ಬಾರದ 4,800 ಬಾಂಗ್ಲಾದೇಶಿ ಅಕ್ರಮ ನುಸುಳುಕೋರರನ್ನು ಕಳೆದ ಒಂದು ತಿಂಗಳ ಅವಧಿಯಲ್ಲಿ ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ರವಿವಾರ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಬಿಜೆಪಿ ಆಯೋಜಿಸಿದ್ದ ‘ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನ–2026’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಗಡಿ ಜಿಲ್ಲೆಗಳಲ್ಲಿ ಬಂಧನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ ಇರಿಸಲಾಗಿರುವ 836 ಅಕ್ರಮ ನುಸುಳುಕೋರರನ್ನೂ ಶೀಘ್ರದಲ್ಲೇ ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗುವುದು ಎಂದು ತಿಳಿಸಿದರು.
ಅಕ್ರಮ ನುಸುಳುಕೋರರನ್ನು ಜೈಲಿಗೆ ಕಳುಹಿಸುವ ಬದಲು ಗಡಿ ಭದ್ರತಾ ಪಡೆಗೆ (BSF) ಹಸ್ತಾಂತರಿಸಲು ಕೇಂದ್ರದ ಕಾನೂನಿನಲ್ಲಿ ಅವಕಾಶವಿದೆ. ಇತರ ರಾಜ್ಯಗಳಲ್ಲಿ ಈ ಕಾನೂನನ್ನು ಬಳಸಲಾಗುತ್ತಿತ್ತು. ಆದರೆ ಪಶ್ಚಿಮ ಬಂಗಾಳದಲ್ಲಿ ಅವರನ್ನು ಜೈಲುಗಳಲ್ಲಿ ಇರಿಸಿ, ಆಹಾರ, ಬಟ್ಟೆ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುತ್ತಿತ್ತು ಎಂದು ಸುವೇಂದು ಅಧಿಕಾರಿ ಟೀಕಿಸಿದರು.
ಉತ್ತರ 24 ಪರಗಣ ಜಿಲ್ಲೆ ಹಕೀಂಪುರದಲ್ಲಿರುವ ಗಡಿ ಹೊರಠಾಣೆ ಮೂಲಕ ದಾಖಲೆರಹಿತ ವಲಸಿಗರನ್ನು ಬಾಂಗ್ಲಾದೇಶಕ್ಕೆ ಕಳುಹಿಸಿರುವುದನ್ನೂ ಅವರು ಉಲ್ಲೇಖಿಸಿದರು. ಅಕ್ರಮ ನುಸುಳುಕೋರರಿಂದ ಪಶ್ಚಿಮ ಬಂಗಾಳದ ಜನಸಂಖ್ಯಾ ಸ್ವರೂಪದಲ್ಲಿ ಬದಲಾವಣೆ ಉಂಟಾಗಿದೆ. ಆದ್ದರಿಂದ ಅವರನ್ನು ಪತ್ತೆಹಚ್ಚಿ ಗಡೀಪಾರು ಮಾಡುವುದು ಸರ್ಕಾರದ ಆದ್ಯತೆಯಾಗಿದೆ’ ಎಂದು ಅಧಿಕಾರಿ ಹೇಳಿದರು.
ಮೇ 20ರಂದು ಅಕ್ರಮ ನುಸುಳುಕೋರರ ಕುರಿತು ತಮ್ಮ ಸರ್ಕಾರದ ನೀತಿ ‘ಪತ್ತೆಹಚ್ಚುವುದು, ಪಟ್ಟಿಯಿಂದ ತೆಗೆದುಹಾಕುವುದು ಮತ್ತು ಗಡೀಪಾರು ಮಾಡುವುದು’ ಎಂದು ಅವರು ಹೇಳಿದ್ದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸುಮಾರು 100 ಕಿ.ಮೀ. ವ್ಯಾಪ್ತಿಯ ಭೂಮಿಯನ್ನು BSFಗೆ ಹಸ್ತಾಂತರಿಸಲಾಗಿದೆ. ಉತ್ತರ ಬಂಗಾಳದ ಆಯಕಟ್ಟಿನ ಮಹತ್ವದ ‘ಚಿಕನ್ ನೆಕ್’ ಪ್ರದೇಶಕ್ಕೆ ಆದ್ಯತೆ ನೀಡಲಾಗಿದೆ. ಅಕ್ರಮ ಒಳನುಸುಳುವಿಕೆ ರಾಜ್ಯದ ಪ್ರಮುಖ ಸಮಸ್ಯೆಯಾಗಿದ್ದು, ಗಡಿ ಭದ್ರತೆಯನ್ನು ಬಲಪಡಿಸಲು BSFಗೆ ಅಗತ್ಯ ಭೂಮಿಯನ್ನು ಒದಗಿಸಲಾಗುತ್ತಿದೆ ಎಂದರು.
ಪಶ್ಚಿಮ ಬಂಗಾಳವು ಬಾಂಗ್ಲಾದೇಶದೊಂದಿಗೆ 2,216 ಕಿ.ಮೀ. ಉದ್ದದ ಗಡಿಯನ್ನು ಹಂಚಿಕೊಂಡಿದ್ದು, ಅದರಲ್ಲಿ ಸುಮಾರು 556 ಕಿ.ಮೀ. ಉದ್ದದ ಗಡಿಭಾಗದಲ್ಲಿ ಇನ್ನೂ ಬೇಲಿ ನಿರ್ಮಾಣವಾಗಿಲ್ಲ ಎಂದು ಸಿಎಂ ಸುವೇಂದು ಅಧಿಕಾರಿ ಹೇಳಿದರು.

















