ಭಾರತ-ಚೀನಾ ಮಧ್ಯೆ ಯುದ್ಧದ ಕಾರ್ಮೋಡ: ಭಾರತೀಯ ಯೋಧರ ಗುಂಡಿಗೆ 43 ಚೀನಾ ಯೋಧರು ಬಲಿ

ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆ ಪ್ರದೇಶದಲ್ಲಿ  ಸೋಮವಾರ ರಾತ್ರಿ ಭಾರತ ಮತ್ತು ಚೀನಾ ಸೇನೆಯೊಂದಿಗೆ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ ಚೀನಾದ 43 ಯೋಧರು ಮೃತಪಟ್ಟಿದ್ದಾರೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಭಾರತ–ಚೀನಾ ವಾಸ್ತವ ಗಡಿ ರೇಖೆಯಲ್ಲಿ (ಎಲ್‌ಎಸಿ) 45 ವರ್ಷಗಳ ಬಳಿಕ ಚೀನಾ ಭಾರತದ ಸೇನೆಯ ಮೇಲೆ ದಾಳಿ ಮಾಡಿದ್ದು, ಇದಕ್ಕೆ ಭಾರತೀಯ ಸೈನಿಕರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
ಚೀನಾದ 43 ಸೈನಿಕರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿರುವುದಾಗಿ ಎಎನ್‌ಐ ಖಚಿತಪಡಿಸಿದೆ.
ಎರಡೂ ಸೇನೆಗಳ ಮುಖಾಮುಖಿ ಸಮಯದಲ್ಲಿ ಸಾವು ನೋವುಗಳಿಗೆ ತುತ್ತಾದ ತಮ್ಮ ಸೈನಿಕರನ್ನು ಏರ್‌ಲಿಫ್ಟ್ ಮಾಡುವ ವೇಳೆ ಎಲ್‌ಎಸಿಯ ಚೀನಾದ ಕಡೆಯಿಂದ ಚಾಪರ್ ಚಟುವಟಿಕೆಯ ಹೆಚ್ಚಳ ಕಂಡುಬಂದಿದೆ ಎಂದು ವರದಿಯಾಗಿದೆ.
ಆರಂಭದಲ್ಲಿ ಭಾರತ ಸೇನೆಯ ಕರ್ನಲ್‌ ಬಿ. ಸಂತೋಷ್‌ ಬಾಬು, ಹವಾಲ್ದಾರ್‌ ಪಳನಿ ಮತ್ತು ಸಿಪಾಯಿ ಓಝಾ ಹುತಾತ್ಮರಾಗಿದ್ದಾರೆ ಮಾಹಿತಿ ಹೊರಬಿದ್ದಿತ್ತು. ಆದರೆ ಇದೀಗ ಸಂಘರ್ಷದ ಸ್ಥಳದಲ್ಲಿ ಕರ್ತವ್ಯದಲ್ಲಿದ್ದು ಗಂಭೀರವಾಗಿ ಗಾಯಗೊಂಡಿದ್ದ ಇನ್ನೂ 17 ಯೋಧರು ಮೃತಪಟ್ಟಿದ್ದಾರೆ ಎಂದು ಮಂಗಳವಾರ ರಾತ್ರಿ ತಿಳಿಸಿದೆ.
ಗಾಯಗೊಂಡ ಯೋಧರು ಅತಿ ಎತ್ತರದ ಪ್ರದೇಶದಲ್ಲಿ ಶೂನ್ಯ ತಾಪಮಾನಕ್ಕೆ ಒಡ್ಡಿಕೊಂಡಿದ್ದರಿಂದಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಮೂಲಕ ಸಂಘರ್ಷದಲ್ಲಿ ಭಾರತೀಯ ಸೇನೆಯ 20 ಮಂದಿ ಯೋಧರು ಹುತಾತ್ಮರಾಗಿರುವುದಾಗಿ ಸೇನೆ ತಿಳಿಸಿದೆ.