ನವದೆಹಲಿ: ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರಿಗೆ ಸಂಬಂಧಿಸಿದ ನಿವೇಶನಗಳಿಂದ ಪತ್ತೆಯಾದ ಅಪಾರ ಹಣದ ಮೊತ್ತವು ಭಾನುವಾರದಂದು 353 ಕೋಟಿ ರೂ ತಲುಪಿದ್ದು, ಅಂತಿಮವಾಗಿ ಎಣಿಕೆ ಕೊನೆಗೊಂಡಿದೆ. ಬುಧವಾರ, ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ಸಂಸದರ ಮನೆಯ ಕಪಾಟಿನಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿತ್ತು.
ಕಳೆದ ಕೆಳವು ದಿನಗಳಿಂದ ನೋಟುಗಳ ಎಣಿಕೆ ಕಾರ್ಯವು ನಡೆದಿತ್ತು. ಈ ಮಧ್ಯೆ ಎಸ್ಬಿಐ ಶಾಖೆಯ ಕಾರ್ಯಾಚರಣೆ ಹಾಗೂ ನೋಟು ಎಣಿಸುವ ಯಂತ್ರಗಳು ಕೆಟ್ಟು ನಿಂತದ್ದರಿಂದ ಹಣ ಎಇಸುವ ಕಾರ್ಯಕ್ಕೆ ಹಿನ್ನಡೆಯಾಗಿತ್ತು. ಇದೀಗ ಭಾನುವಾರದಂದು ಎಣಿಕೆ ಕಾರ್ಯ ಪೂರ್ತಿಯಾಗಿದ್ದು 353 ಕೋಟಿ ರೂ ಅಕ್ರಮ ಹಣ ಪತ್ತೆಯಾಗಿದೆ.
ಒಡಿಶಾ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಾದ್ಯಂತ ಇರುವ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ ಆವರಣದಲ್ಲಿ ಐಟಿ ದಾಳಿಗಳು ನಡೆದಿವೆ. ಸಂಸದರಾಗಲಿ, ಕಂಪನಿಯಾಗಲಿ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಸಂಸದರ ವ್ಯವಹಾರದಲ್ಲಿ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಎಣಿಕೆಯು ದೇಶದಲ್ಲೇ ಏಕ ಕಾರ್ಯಾಚರಣೆಯಲ್ಲಿ ನಡೆದ ಅತಿ ದೊಡ್ಡ ನಗದು ದಂಧೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಎಸ್ಬಿಐ ಶಾಖೆಯಲ್ಲಿ ಎಣಿಕೆ ನಡೆದಿದ್ದು 176 ಬ್ಯಾಗ್ಗಳಲ್ಲಿ ಹಣ ತುಂಬಿಡಲಾಗಿತ್ತು. ಮತ ಎಣಿಕೆ ಕಾರ್ಯಕ್ಕೆ ಮೂರು ಬ್ಯಾಂಕ್ಗಳನ್ನು ನಿಯೋಜಿಸಲಾಗಿತ್ತು. 40 ಕರೆನ್ಸಿ ಎಣಿಕೆ ಯಂತ್ರಗಳನ್ನು ಬಳಸಲಾಗಿತ್ತು. ಎಣಿಕೆಯು ತೆರಿಗೆ ಇಲಾಖೆ ಮತ್ತು ವಿವಿಧ ಬ್ಯಾಂಕ್ಗಳ ಸುಮಾರು 80 ಜನರ ಒಂಬತ್ತು ತಂಡಗಳನ್ನು ಒಳಗೊಂಡಿತ್ತು ಮತ್ತು 24X7 ಪಾಳಿಯಲ್ಲಿ ತೊಡಗಿಸಿಕೊಂಡಿತ್ತು. 10 ನಗದು ತುಂಬಿದ ಕಪಾಟುಗಳು ಪತ್ತೆಯಾದ ನಂತರ, ಭದ್ರತಾ ಸಿಬ್ಬಂದಿ, ಚಾಲಕರು ಮತ್ತು ಇತರ ಸಿಬ್ಬಂದಿ ಸೇರಿದಂತೆ 200 ಅಧಿಕಾರಿಗಳ ಮತ್ತೊಂದು ತಂಡ ಸೇರಿಕೊಂಡಿತ್ತು.