ಸ್ವಾತಂತ್ರ್ಯ ಯೋಧ ಅಲ್ಲೂರಿ ಸೀತಾರಾಮ ರಾಜು ಅವರ 125 ನೇ ಜನ್ಮ ದಿನ: ಹುಟ್ಟೂರಿನಲ್ಲಿ 30 ಅಡಿ ಕಂಚಿನ ಪ್ರತಿಮೆ ಅನಾವರಣ

ಭೀಮಾವರಂ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಆಂಧ್ರಪ್ರದೇಶದ ಭೀಮಾವರಂನಲ್ಲಿ ಅಲ್ಲೂರಿ ಸೀತಾರಾಮ ರಾಜು ಅವರ 30 ಅಡಿ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸುವ ಮೂಲಕ ದೇಶ ಕಂಡ ಮಹಾನ್ ಸ್ವಾತಂತ್ರ್ಯ ಹೋರಾಟಗಾರನಿಗೆ ಗೌರವ ಸಲ್ಲಿಸಲಿದ್ದಾರೆ.

ಪ್ರಧಾನಿಯ ಭೀಮಾವರಂ ಭೇಟಿಯು ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿದೆ. ಈ ಸಂದರ್ಭದಲ್ಲಿ ಅಲ್ಲೂರಿ ಸೀತಾರಾಮ ರಾಜು ಅವರ 125 ನೇ ಜನ್ಮ ದಿನಾಚರಣೆ ಮತ್ತು ಅವರು ನೇತೃತ್ವದ ರಾಂಪ ಬಂಡಾಯದ ಶತಮಾನೋತ್ಸವವನ್ನು ಆಚರಿಸಲಾಗುತ್ತಿದೆ.

PM Modi to Unveil Bronze Statue of Freedom Fighter Alluri Sitarama Raju Tomorrow

ಈ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಪಂಡ್ರಂಗಿಯಲ್ಲಿರುವ ಅಲ್ಲೂರಿ ಸೀತಾರಾಮ ರಾಜು ಅವರ ಜನ್ಮಸ್ಥಳ ಮತ್ತು ಅವರು ದಾಳಿ ಮಾಡಿದ ಚಿಂತಪಲ್ಲಿ ಪೊಲೀಸ್ ಠಾಣೆಯನ್ನು ಪುನಃಸ್ಥಾಪಿಸಲಾಗುವುದು. ಮೊಗಲ್ಲುವಿನಲ್ಲಿ ಅಲ್ಲೂರಿ ಧ್ಯಾನ ಮಂದಿರವನ್ನು ನಿರ್ಮಿಸಲಾಗುವುದು ಮತ್ತು ಅವರ ಜೀವನದ ಪ್ರಮುಖ ಘಟನೆಗಳನ್ನು ಮ್ಯೂರಲ್ ಪೇಂಟಿಂಗ್‌ಗಳು ಮತ್ತು ಎಐ-ಶಕ್ತಗೊಂಡ ಸಂವಾದಾತ್ಮಕ ವ್ಯವಸ್ಥೆಯ ಮೂಲಕ ಪ್ರದರ್ಶಿಸಲಾಗುವುದು.

ಜುಲೈ 4, 1897 ರಲ್ಲಿ ಪಂಡ್ರಂಗಿಯಲ್ಲಿ ಜನಿಸಿದ ಅಲ್ಲೂರಿ, ಬ್ರಿಟಿಷರ ವಿರುದ್ಧ ಆಂಧ್ರಪ್ರದೇಶದ ಘಟ್ಟಗಳಲ್ಲಿ ಸಂಕ್ಷಿಪ್ತ ಆದರೆ ದೃಢವಾದ ರಾಂಪಾ ದಂಗೆಗೆ ಹೆಸರುವಾಸಿಯಾಗಿದ್ದರು. ಮಾನ್ಯಂ ವೀರುಡು (ಕಾಡಿನ ಯೋಧ) ಎಂದು ಕರೆಯಲ್ಪಡುವ ಇವರು ಸಾವಿರಾರು ಬಡ ಆದಿವಾಸಿಗಳನ್ನು ಒಟ್ಟುಗೂಡಿಸಿದ್ದರು ಮತ್ತು ಅವರಲ್ಲಿ ಸ್ವಾತಂತ್ರ್ಯದ ಉತ್ಸಾಹವನ್ನು ಬೆಳಗಿಸಿದ್ದರು.

‘ವಿದೇಶಿ ಆಡಳಿತಗಾರನು ನಮ್ಮ ಜೀವನವನ್ನು ಪುಡಿಮಾಡುತ್ತಿದ್ದಾನೆ ಎಂಬುದನ್ನು ನಿಮ್ಮೆಲ್ಲರಿಗೂ ನೆನಪಿಸಲು ನಾನು ಇದನ್ನು ನನ್ನ ಹೃದಯದ ಬಳಿ ನನ್ನ ಅಂಗಿಯ ಮೇಲೆ ಧರಿಸಿದ್ದೇನೆ’ ಎನ್ನುತ್ತಿದ್ದ ಅಲ್ಲೂರಿ ದಾಸ್ಯದ ನೆನಪಿಗಾಗಿ ಕಿಂಗ್ ಜಾರ್ಜ್ ಚಿತ್ರವಿರುವ ಬ್ಯಾಡ್ಜ್ ಅನ್ನು ಅಂಗಿ ಮೇಲೆ ಧರಿಸುತ್ತಿದ್ದರು. ಕಾಡಿನ ಆದಿವಾಸಿಗಳಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿ, ಪಾರಂಪರಿಕ ಬಿಲ್ಲು ಬಾಣಗಳಿಂದೊಡಗೂಡಿದ ತರಬೇತಿ ನೀಡಲ್ಪಟ್ಟ ಸೈನ್ಯದ ಜೊತೆಗೆ ಬ್ರಿಟಿಷರ ಠಾಣೆಗಳ ಮೇಲೆ ವ್ಯವಸ್ಥಿತ ಆಕ್ರಮಣ ಮಾಡಿ ಬ್ರಿಟಿಷರ ನಿದ್ದೆಗೆಡಿಸಿದ್ದರು.

ಹಲವಾರು ಬಾರಿ ದಂಗೆಯನ್ನು ಹತ್ತಿಕ್ಕಲು ವಿಫಲರಾದ ನಂತರ ಬ್ರಿಟಿಷರು ಅಲ್ಲೂರಿ ತಲೆಗೆ ₹10,000 ಬಹುಮಾನವನ್ನು ಘೋಷಿಸಿ ಏಪ್ರಿಲ್ 1924 ರಲ್ಲಿ ಟಿ.ಜಿ ರುದರ್‌ಫೋರ್ಡ್ ನನ್ನು ಅಲ್ಲೂರಿಯನ್ನು ಪತ್ತೆ ಹಚ್ಚುವ ಕೆಲಸಕ್ಕೆ ನಿಯೋಜಿಸಿದ್ದರು. ಈತ ಆದಿವಾಸಿ ಹಳ್ಳಿಗಳಲ್ಲಿ ಘೋರ ಹಿಂಸಾಚಾರವನ್ನು ನಡೆಸಿದ್ದನು. ಅಂತಿಮವಾಗಿ ಮೇ 7, 1924 ರಂದು ಅಲ್ಲೂರಿಯನ್ನು ಹಿಡಿದು ಕೊಲ್ಲಲಾಯಿತು.

ಇಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಇತಿಹಾಸದ ಪುಟಗಳಲ್ಲಿ ಒಂದಕ್ಷರವೂ ಬರೆಯಲಾಗಿಲ್ಲ. ಇದೇ ಕಾರಣಕ್ಕಾಗಿ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸುವ ಮೂಲಕ ದೇಶದ ಜನತೆಗೆ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರನ ಬಗ್ಗೆ ತಿಳಿಸಿ ಕೊಡುವ ಕೆಲಸ ಮಾಡಲಾಗುತ್ತಿದೆ.