ಮುಂಬೈನಿಂದ ಅಹಮದಾಬಾದ್​ಗೆ 3 ವಿಶೇಷ ರೈಲು : ವಿಶ್ವಕಪ್​ ಫೈನಲ್​ ಪಂದ್ಯ

ಮುಂಬೈ: ಭಾರತ ಆತಿಥ್ಯ ವಹಿಸಿರುವ ಏಕದಿನ ವಿಶ್ವಕಪ್​ (World Cup) ಸರಣಿ ಈಗಾಗಲೇ ಅಂತಿಮಘಟ್ಟ ತಲುಪಿದ್ದು, 2023ರ ವಿಶ್ವಕಪ್​ ವಿಜೇತರನ್ನು ನಿರ್ಧರಿಸಲು ಇನ್ನೊಂದು ಪಂದ್ಯ ಮಾತ್ರ ಬಾಕಿ ಉಳಿದಿದೆ.ಈಗಾಗಲೇ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್​ ಫೈನಲ್​ಗೆ ಲಗ್ಗೆ ಇಟ್ಟಿದ್ದು ಭಾನುವಾರ (ನಾಳೆ) ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರಶಸ್ತಿ ಗೆಲುವಿಗಾಗಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಫೈನಲ್​ ಪಂದ್ಯವಾದ ಕಾರಣ ನಾಳೆ ಪ್ರಧಾನಿ ಮೋದಿ ಸೇರಿದಂತೆ ಸಿನಿತಾರೆಯರು, ಗಣ್ಯರು ಪಂದ್ಯ ವೀಕ್ಷಣೆಗೆ ಆಗಮಿಸಿದುತ್ತಿದ್ದಾರೆ. ಜತೆಗೆ ಈ ವಿಶೇಷ ಕ್ಷಣವನ್ನು ಆನಂದಿಸಲು ಕ್ರಿಕೆಟ್ ಪ್ರೇಮಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಅಹಮದಾಬಾದ್​ಗೆ ಆಗಮಿಸುವ ನಿರೀಕ್ಷೆ ಇದೆ. ಹಾಗಾಗಿ ಭಾರತೀಯ ರೈಲ್ವೆ ವಿವಿಧ ರಾಜ್ಯಗಳಿಂದ ವಿಶೇಷ ರೈಲುಗಳನ್ನು ಓಡಿಸಲು ಸಿದ್ದವಾಗಿದೆ. ಈ ಪೈಕಿ ಮುಂಬೈ ನಿಂದ ಅಹಮದಾಬಾದ್‌ಗೆ 3 ವಿಶೇಷ ರೈಲುಗಳು ಸಂಚರಿಸಲಿವೆ.ನಾಳೆ ಕ್ರಿಕೆಟ್​ ವಿಶ್ವಕಪ್ ಫೈನಲ್​ ಪಂದ್ಯ ಅಹಮದಾಬಾದ್​ನಲ್ಲಿ ನಡೆಯಲಿದ್ದು, ಇದಕ್ಕಾಗಿ ಮುಂಬೈ ನಿಂದ 3 ವಿಶೇಷ ರೈಲುಗಳು ಅಹಮದಾಬಾದ್​ಗೆ ಚಲಿಸಲಿವೆ.​

ಮುಂಬೈ ನಿಂದ ಅಹಮದಾಬಾದ್​ಗೆ 3 ವಿಶೇಷ ರೈಲುಗಳು ವಿವರ

ಮೊದಲ ರೈಲು: ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್-ಅಹಮದಾಬಾದ್ ಸ್ಪೇಷಲ್​ ಎಕ್ಸ್‌ಪ್ರೆಸ್ (01153) ನವೆಂಬರ್ 18ರಂದು ಮುಂಬೈನಿಂದ ರಾತ್ರಿ 10.30ಕ್ಕೆ ಹೊರಡಲಿದ್ದು, ನವೆಂಬರ್ 19 ರಂದು ಬೆಳಗ್ಗೆ 6.40ಕ್ಕೆ ಅಹಮದಾಬಾದ್ ತಲುಪಲಿದೆ. ಹಿಂತಿರುಗುವ ಸಮಯ: ಪಂದ್ಯ ಮುಕ್ತಾಯದ ನಂತರ ಅಹಮದಾಬಾದ್ – ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಸ್ಪೇಷಲ್​ ಎಕ್ಸ್‌ಪ್ರೆಸ್ (01154) ಮಧ್ಯರಾತ್ರಿ 01.44 ಕ್ಕೆ ಹೊರಡಲಿದ್ದು, ನವೆಂಬರ್ 20 ರಂದು ಬೆಳಗ್ಗೆ 10.35ಕ್ಕೆ ಮುಂಬೈ ತಲುಪಲಿದೆ. ಒಟ್ಟು 17 ಬೋಗಿಗಳನ್ನು ಹೊಂದಿರುತ್ತದೆ.

ಎರಡನೇ ರೈಲು: ಬಾಂದ್ರಾ ಟರ್ಮಿನಸ್ – ಅಹಮದಾಬಾದ್ ಸ್ಪೇಷಲ್​ (09001) ಬಾಂದ್ರಾ ಟರ್ಮಿನಸ್‌ನಿಂದ ನವೆಂಬರ್ 18ರಂದು ರಾತ್ರಿ 11.45ಕ್ಕೆ ಹೊರಟು 19 ನವೆಂಬರ್ 2023 ಭಾನುವಾರ ಬೆಳಗ್ಗೆ 07.20ಕ್ಕೆ ಅಹಮದಾಬಾದ್ ತಲುಪುತ್ತದೆ ಹಿಂತಿರುಗುವ ಸಮಯ: ನವೆಂಬರ್20 ರಂದು ಅಹಮದಾಬಾದ್ – ಬಾಂದ್ರಾ ಟರ್ಮಿನಸ್ (09002) ಬೆಳಗ್ಗೆ 4 ಗಂಟೆಗೆ ಹೊರಟು, ಅದೇ ದಿನ ಮಧ್ಯಾಹ್ನ 12.10ಕ್ಕೆ ಬಾಂದ್ರಾ ಟರ್ಮಿನಸ್ ತಲುಪುತ್ತದೆ. ಈ ರೈಲು ದಾದರ್, ಬೊರಿವಲಿ, ಪಾಲ್ಘರ್, ವಾಪಿ, ವಲ್ಸಾದ್, ನವಸಾರಿ, ಸೂರತ್ ಮತ್ತು ವಡೋದರಾ ಮಾರ್ಗವಾಗಿ ಚಲಿಸಲಿದೆ.

ಮೂರನೇ ರೈಲು: ಮುಂಬೈ ಸೆಂಟ್ರಲ್ – ಅಹಮದಾಬಾದ್ (09049) ನವೆಂಬರ್ 18 ರಂದು ಮುಂಬೈ ಸೆಂಟ್ರಲ್‌ನಿಂದ ರಾತ್ರಿ 11.55ಕ್ಕೆ ಹೊರಟು 19 ನವೆಂಬರ್ 2023 ಭಾನುವಾರದಂದು ಬೆಳಗ್ಗೆ 08.45ಕ್ಕೆ ಅಹಮದಾಬಾದ್ ತಲುಪುತ್ತದೆ. ಹಿಂತಿರುಗುವ ಸಮಯ: ಅಹಮದಾಬಾದ್ – ಮುಂಬೈ ಸೆಂಟ್ರಲ್ (09050) ಅಹಮದಾಬಾದ್‌ನಿಂದ ನವೆಂಬರ್ 20 ರಂದು ಬೆಳಗ್ಗೆ 06.20ಕ್ಕೆ ಹೊರಟು ಅದೇ ದಿನ ಮಧ್ಯಾಹ್ನ 02.10 ಕ್ಕೆ ಮುಂಬೈ ಸೆಂಟ್ರಲ್ ತಲುಪುತ್ತದೆ. ಈ ರೈಲು ಬೋರಿವಲಿ, ವಾಪಿ, ವಲ್ಸಾದ್, ನವಸಾರಿ, ಸೂರತ್, ಭರೂಚ್ ಮತ್ತು ವಡೋದರಾ ಮಾರ್ಗವಾಗಿ ಚಲಿಸಲಿದೆ.