ರೈಲಿನಲ್ಲಿ ಸಹ ಪ್ರಯಾಣಿಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಅಪರಿಚಿತ ವ್ಯಕ್ತಿ: 3 ಸಾವು, ಹಲವರಿಗೆ ಗಾಯ

ಕೋಝಿಕ್ಕೋಡ್: ಭಾನುವಾರ ರಾತ್ರಿ 9.50 ರ ಸುಮಾರಿಗೆ ಕೋಝಿಕ್ಕೋಡ್ ರೈಲು ನಿಲ್ದಾಣದಿಂದ (ಉತ್ತರ ಕೇರಳ) ರೈಲು ಹೊರಟ ನಂತರ ಅಲಪುಝಾ-ಕಣ್ಣೂರು ಎಕ್ಸ್‌ಪ್ರೆಸ್‌ನ ಡಿ-1 ಕೋಚ್‌ನೊಳಗೆ ಇಬ್ಬರು ಪ್ರಯಾಣಿಕರ ನಡುವೆ ವಾಗ್ವಾದದ ನಂತರ ಘಟನೆ ಸಂಭವಿಸಿದೆ. ಅಪರಿಚಿತ ವ್ಯಕ್ತಿಯೊಬ್ಬ ಸಹ ಪ್ರಯಾಣಿಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಅನೇಕರಿಗೆ ಸುಟ್ಟ ಗಾಯಗಳಾಗಿವೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.

ಎಳತ್ತೂರು ಮತ್ತು ಕೊಯಿಲಾಂಡಿ ರೈಲು ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ರೈಲು ಹಳಿಗಳ ಮೇಲಿನಿಂದ ಒಂದು ಮಗು ಸೇರಿದಂತೆ ಮೂರು ಶವಗಳನ್ನು ಹೊರತೆಗೆಯಲಾಗಿದೆ. ಬೆಂಕಿ ಹಚ್ಚಿದ ಸಂದರ್ಭ ಭಯಭೀತರಾಗಿ ರೈಲಿನಿಂದ ಹೊರಗೆ ಹಾರಿದ್ದರಿಂದ ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಮೃತರಲ್ಲಿ ಇಬ್ಬರನ್ನು ತೌಫಿಕ್ ಮತ್ತು ರೆಹಾನಾ ಎಂದು ಗುರುತಿಸಲಾಗಿದ್ದು, ಮೂವರೂ ಒಂದೇ ಕುಟುಂಬದವರಾಗಿದ್ದಾರೆ. ರೈಲ್ವೆ ಟ್ರ್ಯಾಕ್ ಗಳಿಂದ ಮತ್ತೊಂದು ಬಾಟಲ್ ಪೆಟ್ರೋಲ್ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ಹೊಂದಿದ್ದ ಬ್ಯಾಗ್ ವಶಪಡಿಸಿಕೊಂಡಿದ್ದರಿಂದ ಪೊಲೀಸರು ಭಯೋತ್ಪಾದಕ ಕೋನದಿಂದಲೂ ತನಿಖೆ ನಡೆಸುತ್ತಿದ್ದಾರೆ ಎಂದು ವರದಿಗಳಾಗಿವೆ.

ರೈಲ್ವೇ ಮೂಲಗಳ ಪ್ರಕಾರ, ಪ್ರಯಾಣಿಕರು ತುರ್ತು ಸರಪಳಿಯನ್ನು ಎಳೆದ ನಂತರ ರೈಲು ನಿಧಾನಗೊಂಡಾಗ ಶಂಕಿತ ವ್ಯಕ್ತಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ರೈಲ್ವೇ ರಕ್ಷಣಾ ಪಡೆಗೆ (ಆರ್‌ಪಿಎಫ್) ಮಾಹಿತಿ ನೀಡಿದ ಇತರ ಪ್ರಯಾಣಿಕರು ಬೇಗನೆ ಬೆಂಕಿಯನ್ನು ನಂದಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕೊರಪುಳ ನದಿಯ ಸೇತುವೆಯ ಮೇಲೆ ರೈಲು ನಿಂತ ತಕ್ಷಣ, ಮೂವತ್ತರ ಆಸುಪಾಸಿನ ವ್ಯಕ್ತಿ ಅದರಿಂದ ಹಾರಿ ತನಗಾಗಿ ಕಾಯುತ್ತಿದ್ದ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಸಮೀಪದ ಮನೆಯೊಂದರ ಸಿಸಿಟಿವಿ ದೃಶ್ಯಾವಳಿಯಿಂದ ದಾಳಿಮಾಡಿದವನ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಯು ಪೂರ್ವಯೋಜಿತ ದಾಳಿ ಎಂದು ಶಂಕಿಸಲಾಗಿದೆ.

ಅಪರಿಚಿತ ವ್ಯಕ್ತಿಯು ಬಾಟಲಿಯದ್ದ ಪೆಟ್ರೋಲ್ ಅನ್ನು ಏಕಾಏಕಿ ಸಹ ಪ್ರಯಾಣಿಕರ ಮೇಲೆ ಸಿಂಪಡಿಸಿದ್ದಾನೆ ಮತ್ತು ಅವರು ಪ್ರತಿಕ್ರಿಯಿಸುವ ಮುನ್ನವೇ ಬೆಂಕಿ ಹಚ್ಚಿ ಓಡಿಹೋಗಿದ್ದಾನೆ ಎಂದು ಗಾಯಗೊಂಡವರಲ್ಲಿ ಒಬ್ಬರು ಪೊಲೀಸರಿಗೆ ತಿಳಿಸಿದ್ದಾರೆ. ಕೋಝಿಕ್ಕೋಡ್ ಪೊಲೀಸ್ ಆಯುಕ್ತರು ಇಂದು ಸುದ್ದಿಗೋಷ್ಠಿ ನಡೆಸುವ ಸಾಧ್ಯತೆಯಿದೆ. ಕೇಂದ್ರ ಗುಪ್ತಚರ ಸಂಸ್ಥೆಗಳು ಘಟನೆಯ ವಿವರಗಳನ್ನು ಕೇಳಿವೆ ಎಂಬ ವರದಿಗಳೂ ಇವೆ.