ಮಾಲ್ಡೀವ್ಸ್‌ಗೆ ನೀಡುವ ಆರ್ಥಿಕ ಸಹಾಯ ಶೇಕಡಾ 22 ರಷ್ಟು ಕಡಿತ; ಲಕ್ಷದ್ವೀಪ ಅಭಿವೃದ್ದಿಯತ್ತ ಭಾರತ ಚಿತ್ತ

ನವದೆಹಲಿ: ಗುರುವಾರ ಸರ್ಕಾರ ಬಿಡುಗಡೆ ಮಾಡಿದ ಮಧ್ಯಂತರ ಬಜೆಟ್ ದಾಖಲೆಯ ಪ್ರಕಾರ, 2024-25 ರ ಆರ್ಥಿಕ ವರ್ಷಕ್ಕೆ ಮಾಲ್ಡೀವ್ಸ್‌ಗೆ ನೀಡುವ ಆರ್ಥಿಕ ಸಹಾಯವನ್ನು ಶೇಕಡಾ 22 ರಷ್ಟು ಕಡಿತಗೊಳಿಸಲು ಭಾರತ ಪ್ರಸ್ತಾಪಿಸಿದೆ. ಕಳೆದ ಕೆಲವು ವರ್ಷಗಳಿಂದ, ಭಾರತವು ಮಾಲ್ಡೀವ್ಸ್‌ಗೆ ಪ್ರಮುಖ ನೆರವು ಮತ್ತು ಸಹಾಯ ಪಾಲುದಾರನಾಗಿದೆ. ದ್ವೀಪ ರಾಷ್ಟ್ರಕ್ಕೆ ಭಾರತದ ನೆರವು ರಕ್ಷಣೆ, ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯದಂತಹ ಕ್ಷೇತ್ರಗಳನ್ನು ಒಳಗೊಂಡಿರುತ್ತದೆ.

ಮಾಲ್ಡೀವ್ಸ್‌ಗೆ ಅಭಿವೃದ್ಧಿ ಸಹಾಯಕ್ಕಾಗಿ 600 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. 2023-24ರಲ್ಲಿ ಮಾಲ್ಡೀವ್ಸ್‌ಗೆ 770.90 ಕೋಟಿ ರೂ.ಗಳ ನೆರವು ನೀಡಲಾಗಿದ್ದು, 2022-23ರಲ್ಲಿ ನೀಡಲಾಗಿದ್ದ 183.16 ಕೋಟಿ ರೂ.ಗಿಂತ ಶೇ.300ರಷ್ಟು ಹೆಚ್ಚಳವಾಗಿತ್ತು. ಇದೀಗ ಸಹಾಯವನ್ನು ಶೇಕಡಾ 22 ರಷ್ಟು ಕಡಿತಗೊಳಿಸಲು ಪ್ರಸ್ತಾಪಿಸಲಾಗಿದೆ.

ಕೇವಲ ಮಾಲ್ಡೀವ್ಸ್ ಮಾತ್ರವಲ್ಲ, ಮುಂಬರುವ ಹಣಕಾಸು ವರ್ಷಕ್ಕೆ ವಿದೇಶಗಳಿಗೆ ನೀಡುವ ತನ್ನ ಒಟ್ಟಾರೆ ನೆರವನ್ನು ಶೇ.10 ರಷ್ಟು ಕಡಿಮೆ ಮಾಡಲು ಭಾರತ ಮುಂದಾಗಿದೆ. ಭಾರತವು 2024-25 ಕ್ಕೆ ವಿದೇಶಿ ರಾಷ್ಟ್ರಗಳಿಗೆ 4883.56 ಕೋಟಿ ರೂಪಾಯಿಗಳನ್ನು ಸಹಾಯಕ್ಕಾಗಿ ಮೀಸಲಿಟ್ಟಿದೆ, ಇದು 2023-24 ರಲ್ಲಿ ಬಜೆಟ್ ಮಾಡಿದ 5426.78 ಕೋಟಿಗಳಿಂದ ಕಡಿಮೆಯಾಗಿದೆ.

ಏತನ್ಮಧ್ಯೆ, ದೇಶದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸರ್ಕಾರ ಗಣನೀಯವಾಗಿ ಹೂಡಿಕೆ ಮಾಡಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಮಧ್ಯಂತರ ಬಜೆಟ್ 2024 ಭಾಷಣದಲ್ಲಿ ಹೇಳಿದ್ದಾರೆ. ವಿಶೇಷವಾಗಿ ದ್ವೀಪ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ ತನ್ನ ಪ್ರವಾಸಿ ಮೂಲಸೌಕರ್ಯವನ್ನು ಸುಧಾರಿಸಲು ಸರ್ಕಾರದಿಂದ ಅವಿಭಜಿತ ಗಮನವನ್ನು ಪಡೆಯುತ್ತದೆ ಎಂದು ಅವರು ಹೇಳಿದ್ದಾರೆ.

ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದ ದ್ವೀಪಸಮೂಹ ರಾಷ್ಟ್ರವಾದ ಮಾಲ್ಡೀವ್ಸ್‌ನೊಂದಿಗಿನ ರಾಜತಾಂತ್ರಿಕ ಸಂಬಂಧ ಹಳಸಿದ ನಂತರ ಅನೇಕ ಭಾರತೀಯರು ಲಕ್ಷದ್ವೀಪವನ್ನು ಪರ್ಯಾಯ ತಾಣವಾಗಿ ನೋಡುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಬಂದಿದೆ.