ಮಲ್ಲಪುರಂನಲ್ಲಿ ಬೋಟ್ ದುರಂತ: ಮಕ್ಕಳು ಸೇರಿದಂತೆ 22 ಜನ ಜಲಸಮಾಧಿ

ತಿರುವನಂತಪುರಂ: ಕೇರಳದ ಮಲಪ್ಪುರಂನ ತಾನೂರ್ ಪ್ರದೇಶದಲ್ಲಿ ಭಾನುವಾರ ಸಂಜೆ ಸುಮಾರು 40 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹೌಸ್‌ಬೋಟ್ ನೀರಿನಲ್ಲಿ ಮುಳುಗಿದ್ದು ಕನಿಷ್ಠ 22 ಜನರು ಸಾವನ್ನಪ್ಪಿದ್ದು ಇದರಲ್ಲಿ ಹೆಚ್ಚಿನವರು ಮಕ್ಕಳು ಎಂದು ವರದಿಯಾಗಿದೆ.

ಜಿಲ್ಲಾಡಳಿತದ ವರದಿಗಳ ಪ್ರಕಾರ, ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ. ಸಚಿವ ವಿ ಅಬ್ದುರಹಿಮಾನ್ ಪ್ರಕಾರ, 7 ಜನರ ಸ್ಥಿತಿ ಗಂಭೀರವಾಗಿದೆ. ದೋಣಿಯಡಿ ಇನ್ನಷ್ಟು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮಗುಚಿ ಬಿದ್ದ ದೋಣಿಯನ್ನು ದಡಕ್ಕೆ ತರುವ ಪ್ರಯತ್ನ ನಡೆಯುತ್ತಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ವಯಂ ಸೇವಕರ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಪೊಲೀಸರ ಪ್ರಕಾರ, ಈ ದಾರುಣ ಘಟನೆ ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ. ಆದರೆ ಅಪಘಾತಕ್ಕೆ ನಿಖರ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ.

ದುರಂತದಲ್ಲಿ ಮಡಿದವರ ಕುಟುಂಬಿಕರಿಗೆ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ರೂ ನೀಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ.