ಮೊಂಗ್ ಕಾಕ್: ಹಾಂಕಾಂಗ್ನಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಆಯೋಜಿಸಿದ್ದ ಮಹಿಳಾ ಉದಯೋನ್ಮುಖ ತಂಡಗಳ ಫೈನಲ್ ಪಂದ್ಯದಲ್ಲಿ ಭಾರತ ‘ಎ’ ತಂಡವು ಬಾಂಗ್ಲಾದೇಶ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಭಾರತೀಯ ಮಹಿಳಾ ಎ ತಂಡ ಪ್ರಶಸ್ತಿಗೆ ಭಾಜನವಾಗಿದೆ. ಮೊದಲಿಗೆ ಬ್ಯಾಟ್ ಬೀಸಿದ ಭಾರತದ ಮಹಿಳೆಯರ ಎ ಟೀಮ್, 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 127 ರನ್ ಗಳಿಸಿತು. ಈ ಮೂಲಕ ಎದುರಾಳಿ ಬಾಂಗ್ಲಾದೇಶ ‘ಎ’ ತಂಡಕ್ಕೆ 128 ರನ್ಗಳ ಗೆಲುವಿನ ಗುರಿ ನೀಡಿತ್ತು.
ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ‘ಎ’ ತಂಡ ಭಾರತದ ಬೌಲರ್ ಗಳ ಎದುರು ರನ್ಗಳಿಸಲು ಪರದಾಡಬೇಕಾಯಿತು. ಅಂತಿಮವಾಗಿ ಟೀಂ ಇಂಡಿಯಾದ ಬೌಲರ್ ಗಳ ಎದುರು ಬಾಂಗ್ಲಾದೇಶದ ಮಹಿಳೆಯರ ಎ ತಂಡ 19.2 ಓವರ್ ಗಳಲ್ಲಿ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು ಕೇವಲ 96 ರನ್ ಗಳಿಗೆ ಆಲೌಟ್ ಆಯಿತು. ಇದರಿಂದಾಗಿ ಟೀಂ ಇಂಡಿಯಾ ಈ ಪಂದ್ಯವನ್ನು 31 ರನ್ಗಳಿಂದ ಗೆದ್ದು ಬೀಗಿತು.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಆಯೋಜಿಸಿದ್ದ 2023 ರ ಮಹಿಳಾ ಉದಯೋನ್ಮುಖ ಟೀಮ್ ಕಪ್ ಅನ್ನು ವುಮೆನ್ಸ್ ಟೀಮ್ ಇಂಡಿಯಾ ‘ಎ’ ಗೆದ್ದುಕೊಂಡಿದೆ. ಅಮೋಘ ಪ್ರದರ್ಶನ ನೀಡಿದ ಟೀಂ ಇಂಡಿಯಾ 19.2 ಓವರ್ಗಳಲ್ಲಿ ಬಾಂಗ್ಲಾದೇಶ ತಂಡವನ್ನು ಆಲೌಟ್ ಮಾಡಿ, ಗೆಲುವು ಸಾಧಿಸಿದೆ.
128 ರನ್ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ‘ಎ’ ತಂಡಕ್ಕೆ ಟೀಂ ಇಂಡಿಯಾ ಆರಂಭಿಕ ಆಘಾತ ನೀಡಿತು. ಆ ಬಳಿಕ ಬಂದ ಎಲ್ಲ ಬ್ಯಾಟರ್ಗಳು ದೊಡ್ಡ ಮೊತ್ತ ಗಳಿಸಲು ವಿಫಲರಾಗಿ ಅಂತಿಮವಾಗಿ ಬಾಂಗ್ಲಾದೇಶ ತಂಡ 19.2 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 96 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತದ ಪರ ಮನ್ನತ್ ಕಶ್ಯಪ್ ಆರಂಭದಲ್ಲಿ ಎರಡು ಆಘಾತ ನೀಡುವುದರೊಂದಿಗೆ ಒಟ್ಟು 3 ವಿಕೆಟ್ ಪಡೆದರೆ, ಶ್ರೇಯಾಂಕ ಪಾಟೀಲ್ ಕೂಡ ಉತ್ತಮ ಬೌಲಿಂಗ್ ಮಾಡಿ ಬಾಂಗ್ಲಾದೇಶ ಆಟಗಾರರನ್ನು ಕೆಣಕಿದರು. ಪಾಟೀಲ್ 4 ಓವರ್ ಗಳಲ್ಲಿ 13 ರನ್ ನೀಡಿ 4 ವಿಕೆಟ್ ಪಡೆದರು. ಬಾಂಗ್ಲಾದೇಶದ ಮೂವರು ಬ್ಯಾಟ್ಸ್ಮನ್ಗಳು ಮಾತ್ರ ಎರಡಂಕಿ ತಲುಪಲು ಸಾಧ್ಯವಾಯಿತು.
ಇಂದು ಮೊಂಗ್ ಕಾಕ್ನಲ್ಲಿ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಹಿಳಾ ಉದಯೋನ್ಮುಖ ಟೀಮ್ ಕಪ್ 2023 ರ ಅಂತಿಮ ಪಂದ್ಯದಲ್ಲಿ ಭಾರತ ತಂಡದ ಪರವಾಗಿ ದಿನೇಶ್ ವೃಂದಾ 29 ಎಸೆತ ಎದುರಿಸಿ 36 ರನ್ ಗಳಿಸಿದರು. ಅವರ ಈ ಸ್ಕೋರ್ನಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹ ಇತ್ತು. ಇನ್ನು ಕನಿಕಾ ಅಹುಜಾ 23 ಎಸೆತಗಳನ್ನು ಎದುರಿಸಿ, 4 ಬೌಂಡರಿಗಳ ನೆರವಿನಿಂದ 30 ರನ್ ಗಳಿಸಿದರು. ಆದರೆ, ನಾಯಕಿ ಶ್ವೇತಾ ಸೆಹ್ರಾವತ್ 13 ರನ್ ಗಳಿಸಲಷ್ಟೇ ಶಕ್ತರಾದರು. ವುಮೆನ್ಸ್ ಟೀಂ ಇಂಡಿಯಾ ಸಣ್ಣ ಸಣ್ಣ ಮೊತ್ತಗಳ ಮೂಲಕ 127 ರನ್ಗಳನ್ನ ಸೇರಿಸುವ ಮೂಲಕ ಎದುರಾಳಿಗೆ 128 ರನ್ಗಳ ಟಾರ್ಗೆಟ್ ನೀಡಿತು.