ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ 20 ಲಕ್ಷ ದೋಚಿದ ಪ್ರಕರಣ: ಸಿಐಡಿ ಇನ್ಸ್‌ಪೆಕ್ಟರ್ ಸೇರಿ ಮೂವರ ಬಂಧನ

ಬೆಂಗಳೂರು: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ ವಾಪಸ್ ಸಿಗುತ್ತದೆ ಎಂದು ನಂಬಿಸಿ ಕೇರಳ ಮೂಲದ ಯುವಕರಿಂದ 20 ಲಕ್ಷಕ್ಕೂ ಅಧಿಕ ಹಣ ದೋಚಿದ ಪ್ರಕರಣದಲ್ಲಿ ಸಿಐಡಿ ಇನ್ಸ್‌ಪೆಕ್ಟರ್ ಸೇರಿ ಮೂವರನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ, ಕುಪೇಂದ್ರ ರೆಡ್ಡಿ ಹಾಗೂ ವಸಂತ್ ಕುಮಾರ್ ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಡಕಾಯಿತಿ, ಬೆದರಿಕೆ, ಹಲ್ಲೆ ಹಾಗೂ ಒಳಸಂಚು ಆರೋಪದಡಿ ಪ್ರಕರಣ ದಾಖಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, 25 ಲಕ್ಷ ರೂ. ಹೂಡಿಕೆ ಮಾಡಿದರೆ 50 ಲಕ್ಷ ರೂ. ವಾಪಸ್ ಸಿಗುತ್ತದೆ ಎಂದು ಕೇರಳದ ಯುವಕರಿಗೆ ಆಮಿಷ ಒಡ್ಡಲಾಗಿತ್ತು. ಇದನ್ನು ನಂಬಿದ ಯುವಕರು ಹಣದೊಂದಿಗೆ ಮಡಿವಾಳದ ಸಿಲಿಕಾನ್ ವ್ಯಾಲಿ ಹೋಟೆಲ್‌ಗೆ ಬಂದಿದ್ದರು. ಈ ಮಾಹಿತಿ ಪಡೆದ ಆರೋಪಿಗಳು ಪೊಲೀಸ್ ಅಧಿಕಾರಿಗಳಂತೆ ನಟಿಸಿ, ಗುರುತಿನ ಚೀಟಿ ತೋರಿಸಿ ಹೋಟೆಲ್‌ಗೆ ಪ್ರವೇಶಿಸಿದ್ದಾರೆ.

ನಂತರ ಯುವಕರಿಗೆ ಬೆದರಿಕೆ ಹಾಕಿ ಹಲ್ಲೆ ನಡೆಸಿ, 20 ಲಕ್ಷಕ್ಕೂ ಅಧಿಕ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ದರೋಡೆ ಬಳಿಕ ಕುಪೇಂದ್ರ ರೆಡ್ಡಿ ಹಣದೊಂದಿಗೆ ಪೊಲೀಸ್ ಜೀಪ್‌ನಲ್ಲಿ ಪರಾರಿಯಾಗಿದ್ದು, ಇತರರು ಬೈಕ್‌ನಲ್ಲಿ ಸ್ಥಳದಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಬಳಿಕ ಯುವಕರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಮಡಿವಾಳ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮಡಿವಾಳ ಎಸಿಪಿ ವಾಸುದೇವ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ಆರೋಪಿಗಳು ಈ ಹಿಂದೆ ಇದೇ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆಯೇ ಹಾಗೂ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಯೇ ಎಂಬ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.