ತಿಂಗಳಿಗೆ ಶೇ.40 ಲಾಭ ಬರುತ್ತೆ ಎಂದು ಆಸೆ ತೋರಿಸಿ ₹2 ಕೋಟಿ ಪಂಗನಾಮ ಹಾಕಿದ! ಎಚ್ಚರ, ಆನ್ ಲೈನ್ ಟ್ರೇಡಿಂಗ್ ಹೆಸರಲ್ಲಿ ನೀವೂ ಹೀಗೆ ಮೋಸ ಹೋಗದಿರಿ!

ಮೈಸೂರು: “ಕುಳಿತಲ್ಲೇ ಲಕ್ಷಾಂತರ ರೂಪಾಯಿ ಸಂಪಾದನೆ”, “ತಿಂಗಳಿಗೆ 40% ಲಾಭ” ಎಂಬ ಆಕರ್ಷಕ ಭರವಸೆಗಳಿಗೆ ಮರುಳಾಗಿ ಮೈಸೂರಿನ ಉದ್ಯಮಿಯೊಬ್ಬರು ಕೋಟ್ಯಂತರ ರೂಪಾಯಿ ಕಳೆದುಕೊಂಡಿರುವ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಜಾರ್ಖಂಡ್ ಮೂಲದ ವ್ಯಕ್ತಿಯೊಬ್ಬನ ಮೋಸದ ಜಾಲಕ್ಕೆ ಸಿಲುಕಿದ ಉದ್ಯಮಿ ಹಾಗೂ ಅವರ ಸ್ನೇಹಿತರು ಒಟ್ಟು ₹2 ಕೋಟಿ ಕಳೆದುಕೊಂಡಿದ್ದಾರೆ.

ಮಾಹಿತಿಯ ಪ್ರಕಾರ, ಜೆ.ಪಿ. ನಗರದ ಉದ್ಯಮಿಗೆ 2025ರ ಜುಲೈನಲ್ಲಿ ಜಾರ್ಖಂಡ್ ಮೂಲದ ಗೌರವ್ ಸಿಂಗ್ ರಾಥೋಡ್ ಎಂಬಾತ ಪರಿಚಯವಾಗಿದ್ದ. ಹೂಡಿಕೆ ಮಾಡಿದ ಮೂಲಧನ ಸುರಕ್ಷಿತವಾಗಿದ್ದು, ಪ್ರತಿ ತಿಂಗಳು ಶೇ.40ರಷ್ಟು ಲಾಭಾಂಶ ನೀಡುವುದಾಗಿ ಆತ ನಂಬಿಸಿದ್ದಾನೆ. ಉದ್ಯಮಿಯ ವಿಶ್ವಾಸ ಗಳಿಸುವ ಉದ್ದೇಶದಿಂದ ಆರಂಭದಲ್ಲಿ ₹6 ಲಕ್ಷ ಲಾಭಾಂಶವನ್ನೂ ಪಾವತಿಸಿದ್ದಾನೆ.

ಈ ಭರವಸೆಯನ್ನು ನಂಬಿದ ಉದ್ಯಮಿ, ತಾವಷ್ಟೇ ಅಲ್ಲದೆ ತಮ್ಮ ಆರು ಮಂದಿ ಸ್ನೇಹಿತರನ್ನೂ ಹೂಡಿಕೆ ಮಾಡಲು ಪ್ರೇರೇಪಿಸಿದ್ದಾರೆ. ಪರಿಣಾಮ, ಎಲ್ಲರೂ ಸೇರಿ ಒಟ್ಟು ₹2 ಕೋಟಿ ಹಣವನ್ನು ಆರೋಪಿಯ ಖಾತೆಗೆ ವರ್ಗಾಯಿಸಿದ್ದಾರೆ.

ಹಣ ಪಡೆದ ಬಳಿಕ ಗೌರವ್ ಸಿಂಗ್ ರಾಥೋಡ್ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾನೆ. ಇದರಿಂದ ಅನುಮಾನಗೊಂಡ ಉದ್ಯಮಿ ಜಾರ್ಖಂಡ್‌ಗೆ ತೆರಳಿ ವಿಚಾರಿಸಿದಾಗ, ಇದೇ ರೀತಿಯ ಆಮಿಷವೊಡ್ಡಿ ನೂರಾರು ಜನರಿಗೆ ಆತ ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ. ತಾವು ಮೋಸದ ಜಾಲದಲ್ಲಿ ಸಿಲುಕಿರುವುದು ತಿಳಿಯುವಷ್ಟರಲ್ಲಿ ಬಹಳ ತಡವಾಗಿತ್ತು.

ಈ ಸಂಬಂಧ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಆದರೆ ವಂಚನೆಗೊಳಗಾದ ಹಣವನ್ನು ಸಂಪೂರ್ಣವಾಗಿ ಮರಳಿ ಪಡೆಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಹೂಡಿಕೆದಾರರು ಅಧಿಕ ಲಾಭದ ಭರವಸೆ ನೀಡುವ ಅಪರಿಚಿತ ವ್ಯಕ್ತಿಗಳು ಅಥವಾ ಸಂಸ್ಥೆಗಳ ಮಾತನ್ನು ಸುಲಭವಾಗಿ ನಂಬಬಾರದು. ಯಾವುದೇ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವ ಮೊದಲು ಅದರ ವಿಶ್ವಾಸಾರ್ಹತೆ, ನೋಂದಣಿ ಮತ್ತು ಕಾನೂನುಬದ್ಧತೆಯನ್ನು ಪರಿಶೀಲಿಸಿ, ಅಗತ್ಯವಿದ್ದರೆ ಹಣಕಾಸು ತಜ್ಞರ ಸಲಹೆ ಪಡೆಯುವುದು ಸುರಕ್ಷಿತ ಎಂದು ಪೊಲೀಸರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.