ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಚಾಲನೆ: 2 ಅಮೃತ್ ಭಾರತ್ 8 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಲೋಕಾರ್ಪಣೆಗೊಳಿಸಿದ ಪ್ರಧಾನಿ

ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಇಂದು ಒಟ್ಟು ಎಂಟು ಹೊಸ ರೈಲುಗಳಿಗೆ ಚಾಲನೆ ನೀಡಿದರು. ಇವುಗಳಲ್ಲಿ ಎರಡು ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಮತ್ತು ಆರು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗಳು ಸೇರಿವೆ. ಇಂದು ಅಯೋಧ್ಯೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ರೈಲುಗಳಿಗೆ ಚಾಲನೆ ನೀಡಿದ್ದಾರೆ. ಕೆಲವು ರೈಲುಗಳಿಗೆ ಅಯೋಧ್ಯೆಯಿಂದ ಚಾಲನೆ ದೊರೆತಿದ್ದರೆ ಇತರವುಗಳನ್ನು ಏಕಕಾಲದಲ್ಲಿ ವೀಡಿಯೊ ಲಿಂಕ್ ಮೂಲಕ ವರ್ಚುವಲ್ ಮೂಲಕ ಚಾಲನೆ ಮಾಡಲಾಯಿತು.

ಅಮೃತ್ ಭಾರತ್ ಎಕ್ಸ್‌ಪ್ರೆಸ್ ಭಾರತೀಯ ರೈಲ್ವೇಯ ಹೊಸ ರೈಲು ಆಗಿದ್ದು, ಸಾಮಾನ್ಯ ನಾಗರಿಕರ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಹೊರತಂರಲಾಗಿದೆ. ಈ ನಾನ್ ಎಸಿ ರೈಲು ಎರಡನೇ ದರ್ಜೆಯ ಕಾಯ್ದಿರಿಸದ ಕೋಚ್‌ಗಳು ಮತ್ತು ಸ್ಲೀಪರ್ ಕೋಚ್‌ಗಳನ್ನು ಹೊಂದಿರುತ್ತದೆ. ಪ್ರತಿ ತುದಿಯಲ್ಲಿ 6,000 HP WAP5 ಇಂಜಿನ್‌ನೊಂದಿಗೆ, ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು 130 kmph ವೇಗದ ಸಾಮರ್ಥ್ಯದೊಂದಿಗೆ ಪುಶ್ ಪುಲ್ ತಂತ್ರಜ್ಞಾನದೊಂದಿಗೆ ಚಲಿಸುತ್ತದೆ.

ಅಮೃತ್ ಭಾರತ್ ರೈಲು ಉತ್ತಮ ವೇಗವರ್ಧನೆಗಾಗಿ ಎರಡೂ ತುದಿಗಳಲ್ಲಿ ಲೊಕೊಗಳನ್ನು ಹೊಂದಿದೆ. ಸುಂದರವಾಗಿ ವಿನ್ಯಾಸಗೊಳಿಸಲಾದ ಆಸನಗಳು, ಉತ್ತಮ ಲಗೇಜ್ ಕೌಂಟರ್ ಗಳು, ಸೂಕ್ತವಾದ ಮೊಬೈಲ್ ಹೋಲ್ಡರ್‌ಗಳೊಂದಿಗೆ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳು, ಎಲ್‌ಇಡಿ ಲೈಟ್‌ಗಳು, ಸಿಸಿಟಿವಿ ಮತ್ತು ಸಾರ್ವಜನಿಕ ಮಾಹಿತಿ ವ್ಯವಸ್ಥೆ ಮುಂತಾದ ಸುಧಾರಿತ ಸೌಲಭ್ಯಗಳನ್ನು ಇದು ರೈಲು ಪ್ರಯಾಣಿಕರಿಗೆ ಒದಗಿಸುತ್ತದೆ.

ಹೊಸ ಅಮೃತ್ ಭಾರತ್ ರೈಲುಗಳು ದರ್ಭಾಂಗ-ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಮತ್ತು ಮಾಲ್ಡಾ ಟೌನ್-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಸ್ (ಬೆಂಗಳೂರು) ಅಮೃತ್ ಭಾರತ್ ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಸಂಚರಿಸಲಿವೆ.

ಶ್ರೀ ಮಾತಾ ವೈಷ್ಣೋದೇವಿ ಕತ್ರಾ-ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್, ಅಮೃತಸರ-ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್, ಕೊಯಮತ್ತೂರು-ಬೆಂಗಳೂರು ಕ್ಯಾಂಟ್ ವಂದೇ ಭಾರತ್ ಎಕ್ಸ್‌ಪ್ರೆಸ್, ಮಂಗಳೂರು-ಮಡ್ಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್; ಜಲ್ನಾ-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ಚಾಲನೆ ನೀಡಲಾದ ಇತರ ರೈಲುಗಳಾಗಿವೆ.