ನವದೆಹಲಿ: ಭಾರತದಲ್ಲಿ ಹೊಸ ಕೊರೊನಾ ಪ್ರಕರಣಗಳಲ್ಲಿ ಭಾರೀ ಇಳಿಕೆಯಾಗಿದೆ. ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 2,63,533 ಜನರಲ್ಲಿ ಸೋಂಕು ದೃಢಪಟ್ಟಿದೆ. ಇದು ಕಳೆದ 28 ದಿನಗಳಲ್ಲೇ ಕನಿಷ್ಠ ಪ್ರಮಾಣವಾಗಿದೆ.
ಹಲವು ದಿನಗಳಿಂದ 4 ಲಕ್ಷದ ಆಸುಪಾಸಿನಲ್ಲಿ ದಾಖಲಾಗುತ್ತಿದ್ದ ಹೊಸ ಸೋಂಕಿತರ ಸಂಖ್ಯೆ ಇದೀಗ 3 ಲಕ್ಷಕ್ಕಿಂತ ಕೆಳಗೆ ಇಳಿದಿರುವುದು, 2ನೇ ಅಲೆಯ ಇಳಿಕೆಯ ಸುಳಿವಾಗಿರಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಹೊಸ ಸೋಂಕಿನ ಪ್ರಮಾಣ ಇಳಿದರೂ ಸಾವಿನ ಪ್ರಮಾಣ ಮಾತ್ರ ಇನ್ನೂ ದೊಡ್ಡ ಮಟ್ಟದಲ್ಲಿಯೇ ದಾಖಲಾಗುತ್ತಿರುವು ಆತಂಕಕ್ಕೆ ಕಾರಣವಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 4,349 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಇದರೊಂದಿಗೆ ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 2,78,719ಕ್ಕೆ ತಲುಪಿದೆ. ಇನ್ನು ಒಟ್ಟು ಸೋಂಕಿತರ ಸಂಖ್ಯೆ 2,52,28,996ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 33,53,765ಕ್ಕೆ ಏರಿಕೆಯಾಗಿದೆ.
ಈ ನಡುವೆ ಕಳೆದ 24 ಗಂಟೆಗಳಲ್ಲಿ 4,22,436 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 2,15,96,512ಕ್ಕೆ ತಲುಪಿದೆ.