ಪಿಎಂಶ್ರೀ ಶಾಲೆ ಯೋಜನೆಗೆ ಅವಿಭಜಿತ ದ.ಕ ಜಿಲ್ಲೆಯ 16 ಶಾಲೆಗಳು ಆಯ್ಕೆ

ಮಂಗಳೂರು: ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಉನ್ನತೀಕರಿಸುವ ಆಶಯದೊಂದಿಗೆ ಎರಡು ವರ್ಷಗಳ ಹಿಂದೆ ಆರಂಭವಾಗಿರುವ ಕೇಂದ್ರ ಸರ್ಕಾರದ ‘ಪಿಎಂಶ್ರೀ ಶಾಲೆ’ ಯೋಜನೆಗೆ ಎರಡನೇ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಶಾಲೆಗಳು ಆಯ್ಕೆಯಾಗಿವೆ.

ದೇಶದಲ್ಲಿ ಒಟ್ಟು 14,500 ಶಾಲೆಗಳಲ್ಲಿ ಈ ಯೋಜನೆ ಜಾರಿಗೊಳಿಸುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರವು ಮೊದಲ ಹಂತದಲ್ಲಿ ಕರ್ನಾಟಕದ 129 ಶಾಲೆಗಳು ಸೇರಿದಂತೆ ಒಟ್ಟು 6,207 ಶಾಲೆಗಳನ್ನು ಆಯ್ಕೆ ಮಾಡಿತ್ತು. ಎರಡನೇ ಹಂತದಲ್ಲಿ ರಾಜ್ಯದ 245 ಶಾಲೆಗಳು ಪಿಎಂಶ್ರೀಗೆ ಆಯ್ಕೆಯಾಗಿದ್ದು, ಅದರಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ತಲಾ ಎಂಟು ಶಾಲೆಗಳು ಒಳಗೊಂಡಿವೆ.

ಈ ಬಾರಿ ಜಿಲ್ಲೆಯ 18 ಶಾಲೆಗಳಿಂದ ಅರ್ಜಿ ಸಲ್ಲಿಕೆಯಾಗಿತ್ತು. ಅಂತಿಮವಾಗಿ ಎಂಟು ಶಾಲೆಗಳು ಆಯ್ಕೆಯಾಗಿವೆ. ಇವುಗಳಲ್ಲಿ ಬಂಟ್ವಾಳ ತಾಲ್ಲೂಕಿನ ಮೂರು, ಉಳ್ಳಾಲ ತಾಲ್ಲೂಕಿನ ಎರಡು, ಮೂಲ್ಕಿ, ಮೂಡುಬಿದಿರೆ ಮತ್ತು ಪುತ್ತೂರು ತಾಲ್ಲೂಕಿನ ತಲಾ ಒಂದು ಶಾಲೆಗಳು ಒಳಗೊಂಡಿವೆ.

ಕಸ ನಿರ್ವಹಣೆ, ಮಳೆನೀರು ಕೊಯ್ಲು, ಸ್ಮಾರ್ಟ್ ತರಗತಿಗಳು, ಸೌರಫಲಕ, ಡಿಜಿಟಲ್ ಗ್ರಂಥಾಲಯ, ಕಟ್ಟಡ ದುರಸ್ತಿ, ಬೋಧನೆಗೆ ಗಣಿತ, ವಿಜ್ಞಾನ ಕಿಟ್‌ಗಳು ಸೇರಿದಂತೆ ನೂರಕ್ಕೂ ಹೆಚ್ಚು ಅಂಶಗಳನ್ನು ಪರಿಗಣಿಸಿ ಅನುದಾನ ಮಂಜೂರು ಆಗುತ್ತದೆ. ಖಾಸಗಿ ಶಾಲೆಗೆ ಕಡಿಮೆಯಿಲ್ಲದಂತೆ ಮೂಲ ಸೌಕರ್ಯ ಹೆಚ್ಚಿಸುವುದು ಈ ಯೋಜನೆಯ ಗುರಿ. ಕೇಂದ್ರ ಸರ್ಕಾರದ ಈ ಯೋಜನೆಗೆ ರಾಜ್ಯ ಸರ್ಕಾರ ಕೂಡ ತನ್ನ ಪಾಲನ್ನು ನೀಡುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನವೂ ಈ ಯೋಜನೆಯಲ್ಲಿ ಒಳಗೊಂಡಿದೆ. ಐದು ವರ್ಷಗಳ ಕಾರ್ಯಕ್ರಮ ಇದಾಗಿದ್ದು, ಪೂರ್ಣಗೊಳ್ಳುವ ವೇಳೆಗೆ ಮಗುವಿನ ಶಿಕ್ಷಣಕ್ಕೆ ಪೂರಕವಾದ ಎಲ್ಲ ಸೌಲಭ್ಯಗಳು ಶಾಲೆಯಲ್ಲಿ ದೊರಕಲಿವೆ ಎಂದು ಖಾಸಗಿ ಮಾಧ್ಯಮ ಪ್ರಜಾವಾಣಿ ವರದಿ ಹೇಳಿದೆ.