ಹೆಬ್ರಿ: ಬರೋಬ್ಬರಿ 15 ಅಡಿ ಉದ್ದದ 12.5 ಕೆಜಿ ತೂಕದ ಕಾಳಿಗ ಸರ್ಪವೊಂದು ಹೆಬ್ರಿ ತಾಲೂಕಿನ ನಾಡ್ಪಾಲ್ ಗ್ರಾಮದಲ್ಲಿ ಕಾಣಸಿಕ್ಕಿದೆ. ಹೆಬ್ರಿಯ ಸೀತಾ ನದಿ ತೀರದಲ್ಲಿರುವ ಭಾಸ್ಕರ್ ಶೆಟ್ಟಿ ಎಂಬವರ ಮನೆಯ ಸಮೀಪ ಕಾಳಿಂಗವೊಂದು ಪ್ರತ್ಯಕ್ಷವಾಗಿದೆ.
ಇದರ ಬಗ್ಗೆ ಮಾಹಿತಿ ಪಡೆದ ಉರಗತಜ್ಞ ಡಾ.ಗೌರಿ ಶಂಕರ್ ತಮ್ಮ ಸಹೋದ್ಯೋಗಿಗಳ ಜೊತೆಗೆ ಸ್ಥಳಕ್ಕೆ ತೆರಳಿದ್ದಾರೆ. ತೋಡಿಗೆ ಹಾಕುವ ದೊಡ್ಡ ಪೈಪ್ನಡಿಯಲ್ಲಿ ಕಾಳಿಂಗ ಪತ್ತೆಯಾಗಿದೆ.
ಡಾ. ಗೌರಿ ಶಂಕರ್ ಆಗುಂಬೆಯ ಕಾಳಿಂಗ ಮನೆಯಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಕಾಳಿಂಗ ಸರ್ಪಗಳ ವಂಶಾವಳಿಯ ಬಗ್ಗೆ ಸಲ್ಲಿಸಿರುವ ಪ್ರಬಂಧಕ್ಕೆ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ. 2 ದಶಕದಿಂದ ಕಾಳಿಂಗ ಸರ್ಪಗಳ ಮೇಲೆ ವಿಶೇಷ ಅಧ್ಯಯನ ಮಾಡಿಕೊಂಡು ಬಂದಿರುವ ಅವರು ಸೋಮವಾರ ಇದುವರೆಗಿನ ಅತಿದೊಡ್ಡ ಕಾಳಿಂಗನನ್ನು ಹಿಡಿದು ಸಂರಕ್ಷಿಸಿದ್ದಾರೆ.
ಇಲ್ಲಿವರೆಗೂ ಗರಿಷ್ಟ ಅಂದರೆ ಸುಮಾರು 10 ಕೆಜಿ ವರೆಗಿನ ಕಾಳಿಂಗ ಸರ್ಪವನ್ನು ಹಿಡಿದಿದ್ದೇನೆ. ಆದರೆ ಸದ್ಯ ಸಿಕ್ಕಿರುವ ಹಾವಿನ ತೂಕ ಬರೋಬ್ಬರಿ 12.50 ಕೆಜಿ ಇದೆ. ಇದು ಇಷ್ಟು ದಿನದ ಅನುಭವದಲ್ಲಿ ಮೊದಲು ದಾಖಲಿಸುತ್ತಿರುವ ವಿಷಯ ಎಂದು ಅವರು ಹೇಳಿದ್ದಾರೆ.
ಸಾಮಾನ್ಯವಾಗಿ 12-13 ಅಡಿ ಉದ್ದದ ಕಾಳಿಂಗವನ್ನು ನೋಡಲು ಸಿಗುತ್ತದೆ. ಸುರಿಸುಮಾರು 15 ಅಡಿ ಉದ್ದದ ಹಾಗೂ ದಷ್ಟಪುಷ್ಟ ದೇಹದ ತೂಕ 12.50 ಕೆಜಿಯಷ್ಟು ಇರುವ ಕಾಳಿಂಗವನ್ನು ಇದೇ ಮೊದಲ ಬಾರಿ ಹಿಡಿದಿರುವುದಾಗಿ ಅವರು ತಿಳಿಸಿದ್ದಾರೆ.
ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿ ಸಮಯ
ಕರಾವಳಿ ಹಾಗೂ ಮಲೆನಾಡಿನ ಜನರಿಗೆ ಚಿರಪರಿಚಿತವಾಗಿರುವ ಕಾಳಿಂಗ ಸರ್ಪಕ್ಕೆ ಇದೀಗ ಮಿಲನದ ಕಾಲ. ಫೆಬ್ರವರಿಯಿಂದ ಮೇ ತಿಂಗಳವರೆಗಿನ ನಡುವಿನ ಅವಧಿ ಈ ಹಾವುಗಳ ಸಂತಾನೋತ್ಪತ್ತಿಯ ಸಮಯ. ಮಿಲನಕ್ಕೆ ತಯಾರಾಗಿರುವ ಹೆಣ್ಣು ಹಾವು ತಮ್ಮ ಫೆರೋಮೋನ್ ಹಾರ್ಮೋನುಗಳನ್ನು ಸಿಂಪಡಿಸಿಕೊಂಡು ಹೋಗುವುದರಿಂದ ಇದರ ಜಾಡು ಹಿಡಿದು ಹೋಗುವ ಗಂಡು ಕಾಳಿಂಗ ಮನೆ ಸುತ್ತಮುತ್ತ ಕಾಣಿಸಿಕೊಳ್ಳುತ್ತವೆ. ಹಾಗೊಮ್ಮೆ ಕಾಳಿಂಗ ಸರ್ಪ ಕಂಡಲ್ಲಿ ಬೆಚ್ಚಿ ಬೀಳುವ ಅಥವಾ ಅವುಗಳನ್ನು ಕೊಲ್ಲುವ ಅವಶ್ಯಕತೆ ಇರುವುದಿಲ್ಲ. ಕಾಳಿಂಗ ಸರ್ಪ ಕಂಡುಬಂದಲ್ಲಿ ಉರಗತಜ್ಞರನ್ನು ಸಂಪರ್ಕಿಸಿ ಅವುಗಳನ್ನು ಸುರಕ್ಷಿತ ಆವಾಸ ಸ್ಥಾನಗಳಿಗೆ ಕಳುಹಿಸುವ ಕಾರ್ಯ ಮಾಡಬಹುದು.