ಶಾಲಾ ಪ್ರವಾಸದ ದೋಣಿ ಮಗುಚಿ ಇಬ್ಬರು ಶಿಕ್ಷಕರ ಸಹಿತ 12 ಶಾಲಾ ಮಕ್ಕಳ ಸಾವು; ವಡೋದರಾದಲ್ಲೊಂದು ದಾರುಣ ಘಟನೆ

ಅಹಮದಾಬಾದ್: ಗುರುವಾರ ಶಾಲಾ ಪ್ರವಾಸದ ವೇಳೆ ವಡೋದರಾದ ಹರ್ನಿ ಸರೋವರದಲ್ಲಿ ದೋಣಿಯೊಂದು ಮಗುಚಿಬಿದ್ದ ಪರಿಣಾಮ 10-13 ವರ್ಷದೊಳಗಿನ ಕನಿಷ್ಠ 12 ಶಾಲಾ ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸಾವನ್ನಪ್ಪಿರುವ ದುರ್ಘಟನೆ ವರದಿಯಾಗಿದೆ.

ದೋಣಿಯು 16 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, ಘಟನೆಯ ಸಮಯದಲ್ಲಿ ಅದರಲ್ಲಿ 34 ಪ್ರಯಾಣಿಕರಿದ್ದರು. ಒಟ್ಟು 30 ವಿದ್ಯಾರ್ಥಿಗಳು ಮತ್ತು ನಾಲ್ವರು ಶಿಕ್ಷಕರು ದೋಣಿಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪಲ್ಟಿಯಾದ ನಂತರ 18 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರನ್ನು ರಕ್ಷಿಸಲಾಗಿದೆ.

ಕೆರೆಯ ಕೆಳಭಾಗದಲ್ಲಿರುವ ಹೂಳಿನಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಎನ್‌ಡಿಆರ್‌ಎಫ್ ಹೇಳಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ನ್ಯೂ ಸನ್‌ರೈಸ್ ಶಾಲೆಯ ವಿದ್ಯಾರ್ಥಿಗಳು ಗುರುವಾರ ಸಂಜೆ 4.30 ರ ಸುಮಾರಿಗೆ ಸ್ಥಳಕ್ಕೆ ಆಗಮಿಸಿ ಶಾಲಾ ಪ್ರವಾಸದ ಭಾಗವಾಗಿ ದೋಣಿ ಹತ್ತಿದ್ದಾರೆ. ಒಟ್ಟು 60 ವಿದ್ಯಾರ್ಥಿಗಳು ಪ್ರವಾಸದ ಭಾಗವಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಲೇಕ್ ಝೋನ್ ಎಂದು ಕರೆಯಲ್ಪಡುವ ಹರ್ನಿ ಸರೋವರದಲ್ಲಿ ಬೋಟಿಂಗ್ ಸೌಲಭ್ಯವನ್ನು ಕೋಟಿಯಾ ಪ್ರಾಜೆಕ್ಟ್ಸ್ ಎಂಬ ಖಾಸಗಿ ಕಂಪನಿಯು 2016 ರಲ್ಲಿ ಸೌಂದರ್ಯೀಕರಣ ಯೋಜನೆಯ ನಂತರ ವಡೋದರ ಮುನ್ಸಿಪಲ್ ಕಾರ್ಪೊರೇಶನ್‌ನೊಂದಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಒಪ್ಪಂದದಡಿಯಲ್ಲಿ ನಡೆಸುತ್ತಿದೆ.

ಸೌಲಭ್ಯದ ವ್ಯವಸ್ಥಾಪಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಮತ್ತು ಐ.ಪಿ.ಸಿ ಕಾನೂನಿನಡಿಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.