ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ ಎಂದೂ ಆಸ್ಪತ್ರೆಗೆ ಹೋಗದ 115 ವರ್ಷದ ಸ್ಪ್ಯಾನಿಷ್ ಮುತ್ತಜ್ಜಿ!

ಬಾರ್ಸಿಲೋನಾ: ಯುನೈಟೆಡ್ ಸ್ಟೇಟ್ಸ್‌ನಲ್ಲಿ ಜನಿಸಿದ ಸ್ಪ್ಯಾನಿಷ್ ಮುತ್ತಜ್ಜಿ 115 ವರ್ಷ ವಯಸ್ಸಿನ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯಾಗುವ ಸಾಧ್ಯತೆಯಿದೆ ಎಂದು ಗಿನ್ನೆಸ್ ವಿಶ್ವ ದಾಖಲೆಗಳ ಸಲಹೆಗಾರರೊಬ್ಬರು ಬುಧವಾರ ಹೇಳಿದ್ದಾರೆ.

118 ವರ್ಷ ವಯಸ್ಸಿನ ಫ್ರೆಂಚ್ ಸನ್ಯಾಸಿನಿ ಲುಸಿಲ್ ರಾಂಡನ್ ಮಂಗಳವಾರದಂದು ನಿಧನರಾದ ನಂತರ ಮಾರಿಯಾ ಬ್ರನ್ಯಾಸ್ ಮೊರೆರಾ ಪ್ರಪಂಚದ ಹಿರಿಯ ವ್ಯಕ್ತಿ ಎನ್ನುವ ಹಿರಿಮೆಗೆ ಪಾತ್ರರಾಗಲಿದ್ದಾರೆ ಎಂದು ಜೆರೊಂಟಾಲಜಿಯ ಹಿರಿಯ ಸಲಹೆಗಾರ ರಾಬರ್ಟ್ ಡಿ ಯಂಗ್ ಹೇಳಿದ್ದಾರೆ.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಡಾಕ್ಯುಮೆಂಟ್ ಪರಿಶೀಲನೆಗಳನ್ನು ನಡೆಸಿದ ನಂತರ ಮತ್ತು ಬ್ರನ್ಯಾಸ್ ಮೊರೆರಾ ಅವರ ಕುಟುಂಬವನ್ನು ಸಂದರ್ಶಿಸಿದ ನಂತರ ಅಧಿಕೃತ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಜೆರೊಂಟಾಲಜಿ ರಿಸರ್ಚ್ ಗ್ರೂಪ್‌ನ ಸೂಪರ್ ಸೆಂಟೆನೇರಿಯನ್ ಸಂಶೋಧನಾ ಡೇಟಾಬೇಸ್‌ನ ನಿರ್ದೇಶಕರೂ ಆಗಿರುವ ಯಂಗ್ ಹೇಳಿದ್ದಾರೆ.

ಬ್ರನ್ಯಾಸ್ ಮೊರೆರಾ ಮಾರ್ಚ್ 4, 1907 ರಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಜನಿಸಿದರು. ಮೂಲತಃ ಇವರು ಸ್ಪೇನ್ ದೇಶದವರಾಗಿದ್ದಾರೆ. 1918 ರ ಫ್ಲ್ಯೂ ಜ್ವರ, ಎರಡು ವಿಶ್ವ ಯುದ್ಧಗಳು ಮತ್ತು ಸ್ಪೇನ್‌ನ ಅಂತರ್ಯುದ್ದಗಳನ್ನು ಮೊರೆರಾ ಕಂಡಿದ್ದಾರೆ. ಈಶಾನ್ಯ ಸ್ಪೇನ್‌ನ ಓಲೋಟ್ ಪಟ್ಟಣದಲ್ಲಿರುವ ಸಾಂಟಾ ಮಾರಿಯಾ ಡೆಲ್ ತುರಾ ನರ್ಸಿಂಗ್ ಹೋಮ್ ನಲ್ಲಿ ಮೊರೆರಾ ಕಳೆದ ಎರಡು ದಶಕಗಳಿಂದ ವಾಸಿಸುತ್ತಿದ್ದಾರೆ. ಬ್ರನ್ಯಾಸ್ ಮೊರೆರಾ ಅವರ ಕಿರಿಯ ಮಗಳು, 78 ವರ್ಷ ವಯಸ್ಸಿನ ರೋಸಾ ಮೊರೆಟ್, ತನ್ನ ತಾಯಿಯ ದೀರ್ಘಾಯುಷ್ಯಕ್ಕೆ “ವಂಶವಾಹಿನಿಗಳು” ಕಾರಣವೆಂದು ಹೇಳಿದ್ದಾರೆ.

ಆಕೆ ಎಂದಿಗೂ ಆಸ್ಪತ್ರೆಗೆ ಹೋಗಿಲ್ಲ, ಆಕೆ ಯಾವುದೇ ಮೂಳೆ ಮುರಿತಕ್ಕೊಳಗಾಗಿಲ್ಲ, ಆಕೆ ಆರೋಗ್ಯವಾಗಿದ್ದಾಳೆ ಮತ್ತು ಆಕೆಗೆ ಯಾವುದೇ ನೋವು ಇಲ್ಲ ಎಂದು ಮೊರೆಟ್ ಬುಧವಾರ ಕ್ಯಾಟಲಾನ್ ಟೆಲಿವಿಷನ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

1931 ರಲ್ಲಿ ಸ್ಪೇನ್ ನ ಅಂತರ್ಯುದ್ದದ ಐದು ವರ್ಷಕ್ಕೂ ಮೊದಲೆ ಬ್ರನ್ಯಾಸ್ ಮೊರೆರಾ ಮತ್ತು ಅವರ ತಾಯಿ ಬಾರ್ಸಿಲೋನಾದಲ್ಲಿ ನೆಲೆಸಿದರು. ಇದೇ ಸಂದರ್ಭ ಅವರು ವೈದ್ಯರನ್ನು ವಿವಾಹವಾದರು. ಪತಿ 72 ನೇ ವಯಸ್ಸಿನಲ್ಲಿ ಸಾಯುವವರೆಗೂ ದಂಪತಿಗಳು ನಾಲ್ಕು ದಶಕಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು. ಅವರಿಗೆ ಮೂರು ಮಕ್ಕಳು(ಒಬ್ಬರು ಮೃತರಾಗಿದ್ದಾರೆ) 11 ಮೊಮ್ಮಕ್ಕಳು ಮತ್ತು 11 ಮರಿ ಮೊಮ್ಮಕ್ಕಳನ್ನು ಹೊಂದಿದ್ದಾರೆ.

ತನ್ನ 113 ನೇ ಹುಟ್ಟುಹಬ್ಬದ ಬಳಿಕ ಕೋವಿಡ್ ಸಾಂಕ್ರಾಮಿಕಕ್ಕೂ ತುತ್ತಾಗಿದ್ದ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರು.