ವಾಷಿಂಗ್ಟನ್: ರಷ್ಯಾ ಮತ್ತು ಇರಾನ್ ಮೇಲಿನ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸುವ ಮಹತ್ವದ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಸೆ.18) ಸಹಿ ಹಾಕಿದ್ದಾರೆ. ‘ಲಿಂಡ್ಸೆ ಒ. ಗ್ರಹಾಂ ಸ್ಯಾಂಕ್ಷನಿಂಗ್ ರಷ್ಯಾ ಆ್ಯಂಡ್ ಇರಾನ್ ಆ್ಯಕ್ಟ್ ಆಫ್ 2026’ ಎಂದು ಕರೆಯಲಾಗುವ ಈ ಕಾನೂನು, ರಷ್ಯಾದಿಂದ ತೈಲ ಮತ್ತು ನೈಸರ್ಗಿಕ ಅನಿಲ ಖರೀದಿಸುವ ಪ್ರಮುಖ ದೇಶಗಳ ಮೇಲೆ ಗರಿಷ್ಠ ಶೇ.100ರಷ್ಟು ಸುಂಕ ವಿಧಿಸುವ ಅಧಿಕಾರವನ್ನು ಅಮೆರಿಕ ಅಧ್ಯಕ್ಷರಿಗೆ ನೀಡಿದೆ.
ಈ ಕಾನೂನಿನಡಿ ಭಾರತ ಮತ್ತು ಚೀನಾ ಸೇರಿದಂತೆ ರಷ್ಯಾದ ಇಂಧನದ ಪ್ರಮುಖ ಖರೀದಿದಾರರ ವಿರುದ್ಧ ಭವಿಷ್ಯದಲ್ಲಿ ಹೆಚ್ಚುವರಿ ಸುಂಕ ವಿಧಿಸುವ ಅವಕಾಶವಿದೆ. ಆದರೆ ಭಾರತ ಅಥವಾ ಚೀನಾ ಮೇಲೆ ಶೇ.100ರಷ್ಟು ಸುಂಕವನ್ನು ತಕ್ಷಣವೇ ವಿಧಿಸಲಾಗಿದೆ ಎಂದರ್ಥವಲ್ಲ. ಸುಂಕ ವಿಧಿಸುವುದು ಸೇರಿದಂತೆ ಕಾನೂನಿನ ಹಲವು ಅಧಿಕಾರಗಳ ಬಳಕೆಯ ಕುರಿತು ಅಂತಿಮ ನಿರ್ಧಾರವನ್ನು ಅಧ್ಯಕ್ಷರಿಗೆ ಬಿಡಲಾಗಿದೆ.
ಶ್ವೇತಭವನದ ಪ್ರಕಾರ, ಸೆ.18ರಂದು ಟ್ರಂಪ್ ಅವರು H.R. 5334 ಮಸೂದೆಗೆ ಸಹಿ ಹಾಕಿದ್ದು, ಇದು ರಷ್ಯಾದ ವಿರುದ್ಧದ ಶಾಸನಬದ್ಧ ನಿರ್ಬಂಧಗಳು, ಸುಂಕಗಳು ಮತ್ತು ನಿಷೇಧಗಳನ್ನು ವಿಸ್ತರಿಸುತ್ತದೆ. ಇರಾನ್ ಮೇಲಿನ ಅಸ್ತಿತ್ವದಲ್ಲಿರುವ ನಿರ್ಬಂಧಗಳನ್ನೂ ವಿಸ್ತರಿಸಲಾಗಿದೆ.
ಕಾನೂನು ರಷ್ಯಾದ ನಾಯಕತ್ವ, ಇಂಧನ ಮತ್ತು ರಕ್ಷಣಾ ವಲಯಗಳ ಮೇಲಿನ ನಿರ್ಬಂಧಗಳನ್ನು ಬಿಗಿಗೊಳಿಸುವುದರ ಜತೆಗೆ, ಅಸ್ತಿತ್ವದಲ್ಲಿರುವ ನಿರ್ಬಂಧಗಳನ್ನು ತಪ್ಪಿಸಿ ರಷ್ಯಾದ ತೈಲ ಸಾಗಣೆಗೆ ಬಳಸಲಾಗುತ್ತಿದೆ ಎನ್ನಲಾಗುವ ‘ಶಾಡೋ ಫ್ಲೀಟ್’ ಹಡಗುಗಳ ಮೇಲೂ ಕ್ರಮಕ್ಕೆ ಅವಕಾಶ ನೀಡುತ್ತದೆ.
ಈ ಮಸೂದೆಗೆ ಸೆನೆಟ್ ಕಳೆದ ತಿಂಗಳು 86-11 ಮತಗಳಿಂದ ಅನುಮೋದನೆ ನೀಡಿತ್ತು. ಬಳಿಕ ಸೆ.16ರಂದು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ 262-159 ಮತಗಳಿಂದ ಅಂಗೀಕರಿಸಿತ್ತು. ನಂತರ ಅಧ್ಯಕ್ಷರ ಸಹಿಗಾಗಿ ಶ್ವೇತಭವನಕ್ಕೆ ಕಳುಹಿಸಲಾಗಿತ್ತು.
ಜುಲೈನಲ್ಲಿ ನಿಧನರಾದ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಅವರ ಹೆಸರನ್ನು ಈ ಕಾನೂನಿಗೆ ಇಡಲಾಗಿದೆ. ರಷ್ಯಾ ವಿರುದ್ಧ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಗ್ರಹಾಂ ಒಂದು ವರ್ಷಕ್ಕೂ ಹೆಚ್ಚು ಕಾಲ ಈ ಮಸೂದೆಗೆ ಬೆಂಬಲ ನೀಡಿದ್ದರು.
ರಷ್ಯಾದ ಕಚ್ಚಾ ತೈಲದ ಪ್ರಮುಖ ಖರೀದಿದಾರರಾಗಿರುವ ಭಾರತ ಮತ್ತು ಚೀನಾ ಈ ಹೊಸ ಕಾನೂನಿನ ಪರಿಣಾಮ ಎದುರಿಸಬಹುದಾದ ದೇಶಗಳಲ್ಲಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಮೆರಿಕ ಈ ಸುಂಕದ ಅಧಿಕಾರವನ್ನು ಹೇಗೆ ಬಳಸಲಿದೆ ಎಂಬುದು ಮಹತ್ವದ ಬೆಳವಣಿಗೆಯಾಗಲಿದೆ.















